ಕ್ರೀಡೆಯಲ್ಲಿ ಬಂಟರ ಸಾಧನೆ ಗಣನೀಯ: ಐಕಳ ಹರೀಶ್ ಶೆಟ್ಟಿ

0
4


ಬಂಟ ಕ್ರೀಡೋತ್ಸವ ಸಮಾರೋಪ ಸಮಾರಂಭ, ಪ್ರಶಸ್ತಿ ವಿತರಣೆ

ಮಂಗಳೂರು: ಬಂಟರು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕ್ರೀಡೆಯಿಂದ ದೈಹಿಕ ಕ್ಷಮತೆಗೆ ಪ್ರಯೋಜನವಾಗುತ್ತದೆ. ಕ್ರೀಡೆಯಲ್ಲಿ ಬಂಟರ ಸಾಧನೆ ಉತ್ತುಂಗದಲ್ಲಿದೆ. ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಕ್ರೀಡೆಯಲ್ಲಿ ಬಂಟ ಪ್ರತಿಭಾವಂತ ಕ್ರೀಡಾಳುಗಳು ಪಾಲ್ಗೊಳ್ಳುವಂತಾಗಲಿ. ಕ್ರೀಡೆಯ ಮೂಲಕ ಸಮಾಜ ಬಾಂಧವರನ್ನು ಒಟ್ಟು ಸೇರಿಸಿ ಸಂಘಟನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ನುಡಿದರು.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಬಂಟ ಕ್ರೀಡೋತ್ಸವ-2026 ಇದರ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಉದ್ಯಮಿ ಗಿರೀಶ್ ಎಂ ಶೆಟ್ಟಿ ಕಟೀಲು ಮಾತನಾಡಿ ಬಂಟರು ಶಿಸ್ತನ್ನು ಕಾಪಾಡಿ ಬೇರೆ ಸಮುದಾಯದವರನ್ನೂ ಪ್ರೀತಿಸಿದವರು. ಕ್ರೀಡೆಯ ಮೂಲಕ ಬಂಟರು ಸಂಘಟಿತರಾಗಿ ಕೆಲಸ ಮಾಡುವಂತಾಗಲಿ ಎಂದರು.
ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯoತಾಯ ಅಡ್ಯಾರುಗುತ್ತು ಅವರು ಮಾತನಾಡಿ, ಕ್ರೀಡಾಕೂಟ ಹಮ್ಮಿಕೊಂಡ ಸಂಘಟಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮೋಟಾರ್ ರ್ಯಾಲಿ ಚಾಂಪಿಯನ್ ಅಶ್ವಿನ್ ನಾಯ್ಕ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಮೊದಲ ಬಹುಮಾನ ಉಳ್ಳಾಲ ಬಂಟರ ಸಂಘ ಹಾಗೂ ದ್ವಿತೀಯ ಬಹುಮಾನ ನೀರುಮಾರ್ಗ ಬಂಟರ ಸಂಘ ಪಡೆದವು. ಪುರುಷರ ಹಗ್ಗ ಜಗ್ಗಾಟದಲ್ಲಿ ಜಪ್ಪಿನ ಮೊಗರು ಬಂಟರ ಸಂಘಕ್ಕೆ ಪ್ರಥಮ ಹಾಗೂ ಪುತ್ತೂರು ಬಂಟರ ಸಂಘ ದ್ವಿತೀಯ ಸ್ಥಾನಿಯಾಯಿತು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಸುರತ್ಕಲ್ ಬಂಟರ ಸಂಘ ಎ ಹಾಗೂ ದ್ವಿತೀಯ ಸ್ಥಾನವನ್ನು ಸುರತ್ಕಲ್ ಬಂಟರ ಸಂಘ ಬಿ ಗಳಿಸಿತು. ಗುರುಪುರ ಬಂಟರ ಮಾತೃ ಸಂಘಕ್ಕೆ ಸಮಗ್ರ ಚಾಂಪಿಯನ್ ಪ್ರಶಸ್ತಿ ಲಭಿಸಿತು.
ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಟಾನದ ಟ್ರಸ್ಟಿಗಳಾದ ಕೃಷ್ಣಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಡಾ. ಆಶಾಜ್ಯೋತಿ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಎಮ್ ಕರುಣಾಕರ ಶೆಟ್ಟಿ, ಉಪಾಧ್ಯಕ್ಷ ಹೇಮಾನಾಥ ಶೆಟ್ಟಿ ಕಾವು , ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮಮೋಹನ್ ರೈ, ಮಾಜಿ ಕಾರ್ಯದರ್ಶಿ ಎಂ.ಸುಂದರ ಶೆಟ್ಟಿ, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಸ್ವಾಗತಿಸಿದರು. ಬಂಟ ಕ್ರೀಡಾ ಕೂಟದ ಸಂಚಾಲಕ ಜಗದೀಶ್ ಶೆಟ್ಟಿ ಬಿಜೈ ವಂದಿಸಿದರು. ಗಣೇಶೋತ್ಸವ ಸಮಿತಿಯ ಸಮನ್ವಯಕಾರ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಸನ್ಮಾನಿತರನ್ನು ಪರಿಚಯಿಸಿದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.