ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್ ಮತ್ತು ಪಲ್ಸರ್ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕು ಸುತ್ತುಕೋಟೆಯ ಶ್ರೀ ಸಪ್ತಕೋಟಿ ಪೆಟ್ರೋಲ್ ಬಂಕ್ ಮುಂಭಾಗ ಗುರುವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಅಬ್ನಾನ್ (23) ಎಂದು ಗುರುತಿಸಲಾಗಿದೆ. ಗಾಯಗೊಂಡ ಮತ್ತೋರ್ವನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಶಿವಮೊಗ್ಗದಿಂದ ಶಿಕಾರಿಪುರದತ್ತ ತೆರಳುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಪಲ್ಸರ್ ಬೈಕ್ ಬಸ್ಸಿನ ಮುಂಭಾಗಕ್ಕೆ ನುಗ್ಗಿ ಸಿಲುಕಿಕೊಂಡಿದ್ದು, ಬಳಿಕ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬೈಕಿನಲ್ಲಿದ್ದವರ ದೇಹಗಳಿಗೂ ಬೆಂಕಿ ತಗುಲಿರುವುದಾಗಿ ತಿಳಿದುಬಂದಿದೆ.
ಅಪಘಾತದ ತೀವ್ರತೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಕೆಲವರು ಎಮರ್ಜನ್ಸಿ ಬಾಗಿಲು ಹಾಗೂ ಕಿಟಕಿಗಳ ಮೂಲಕ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಪರಿಣಾಮ ಸವಳಂಗ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಡಿವೈಎಸ್‌ಪಿ ಸಂಜೀವ್ ಕುಮಾರ್, ಕುಂಸಿ ಠಾಣೆಯ ಪಿಎಸ್‌ಐ ಪಾರ್ವತಿ ಬಾಯಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

