ನಿರ್ಮಾಣ ಹಂತದ ಸೇತುವೆ ಕುಸಿದು 6 ಕಾರ್ಮಿಕರು ಮೃತ..!

0
43

ಮೀರ್‌ಪುರ : ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನ ಜಾವ ಸಂಭವಿಸಿದ ಭೀಕರ ದುರಂತದಲ್ಲಿ, ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಆರು ಮಂದಿ ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ಈ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಶುಕ್ರವಾರ ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಬೆತ್ವಾ ನದಿಯ ಮೇಲೆ ನಿರ್ಮಿಸಲಾಗುತ್ತಿದ್ದ ಸೇತುವೆಯ ಒಂದು ಭಾಗ ಏಕಾಏಕಿ ಕುಸಿದಿದೆ. ಆ ವೇಳೆ ಸೇತುವೆಯ ಮೇಲೆಯೇ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋಕೇಂದ್ರ, ಕುಲದೀಪ್ ನಿಶಾದ್, ಸಾವಂತ್ ಯಾದವ್, ಸಭಾಜಿತ್, ಪುಷ್ಪೇಂದ್ರ ಸಿಂಗ್ ಚೌಹಾಣ್ ಹಾಗೂ ರಾಜೇಶ್ ಪಾಲ್ ಮೃತ ಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ಜಿಲ್ಲಾಡಳಿತ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿ ನಿರ್ಮಾಣ ಕಾಮಗಾರಿ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಹಾಗೂ ಕಾರ್ಮಿಕರನ್ನು ಅಪಾಯಕಾರಿ ಪರಿಸ್ಥಿತಿಯಲ್ಲಿ ಉಳಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುರಾರಾದ ಮೊರ್ಕಂದರ್ ಪರ್ಸಾನಿ ಮತ್ತು ನೈಥಿ ಗ್ರಾಮಗಳ ಸಂಪರ್ಕಕ್ಕಾಗಿ ಈ ಸೇತುವೆ ನಿರ್ಮಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here