
ಮಂಗಳೂರು : ಉಡುಪಿಯಿಂದ ಮಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಗದೂತ ಬಸ್ಸಿಗೆ ಕಾರಿನಲ್ಲಿ ಬಂದ ನಾಲ್ವರು ಯುವಕರು ತಡೆಯೊಡ್ಡಿ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ಅಕ್ಟೋಬರ್ 2ರಂದು ಮುಲ್ಕಿ ಸಮೀಪ ನಡೆದಿದೆ.
ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ನವದುರ್ಗಾ ಬಸ್ಸಿಗೆ ಕೆಎ–28–ಝಡ್–9567 ನೋಂದಣಿ ಸಂಖ್ಯೆಯ ಫೋರ್ಡ್ ಕಾರಿನಲ್ಲಿ ಬಂದ ನಾಲ್ವರು ಯುವಕರು ಮುಲ್ಕಿ ಬಳಿ ತಡೆಯೊಡ್ಡುತ್ತಾ ಸಾಗಿದ್ದರು. ಬಳಿಕ ಬಸ್ಸನ್ನು ತಡೆದು ನಿಲ್ಲಿಸಿ ಚಾಲಕನ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಬಸ್ಸಿನ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಮುಕ್ಕ ಚೆಕ್‌ಪೋಸ್ಟ್ ಬಳಿ ಪೊಲೀಸರು ಕಾರನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಕಾರಿನಲ್ಲಿದ್ದ ಯುವಕರು ಅಮಲು ಪದಾರ್ಥ ಸೇವಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣ ದಾಖಲಿಸಲಾಗಿದೆ.
