ಒಗ್ಗಟ್ಟಿನಲ್ಲಿ ಬಲವಿದೆ: 3 ಕಿ.ಮೀ. ರಸ್ತೆ ಸ್ವಚ್ಛಗೊಳಿಸಿದ ಜೆಕೆ ಫ್ರೆಂಡ್ಸ್ ಹಾಗೂ ಊರವರು

0
1


ಕಡಂದಲೆ: ಜೆಕೆ ಫ್ರೆಂಡ್ಸ್ ಜೋಡುಕಟ್ಟೆ–ಕಡಂದಲೆ ಹಾಗೂ ಊರಿನ ಜನರ ಸಹಕಾರದಿಂದ ಜೋಡುಕಟ್ಟೆ ರಸ್ತೆಯ ಸುಮಾರು 3 ಕಿ.ಮೀ. ಉದ್ದದ ರಸ್ತೆ ಬದಿಯಲ್ಲಿ ಬೆಳೆದಿದ್ದ ಹುಲ್ಲು, ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.


ರಸ್ತೆ ಬದಿಯ ಪೊದೆಗಳು ಬೆಳೆದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿದ್ದವು. ಈ ಭಾಗದಲ್ಲಿ ಪೊದೆಗಳ ಕಾರಣದಿಂದ ಹಲವು ಅಪಘಾತಗಳು ಸಂಭವಿಸಿದ್ದರೂ ಸಂಬಂಧಪಟ್ಟ ಆಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಊರಿನವರು ಸ್ವಯಂಪ್ರೇರಿತರಾಗಿ ಒಂದಾಗಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್ ಮಾತನಾಡಿ, “ಪಂಚಾಯತ್ ಮಾಡಬೇಕಾದ ಕೆಲಸವನ್ನು ಊರಿನವರು ಸೇರಿ ಮಾಡಿರುವುದು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಸಾಕ್ಷಿ. ಊರಿನ ಬಗ್ಗೆ ಅಭಿಮಾನ, ಹೆಮ್ಮೆ ಹಾಗೂ ಪ್ರೀತಿ ಇದ್ದಾಗ ರಸ್ತೆ ಸ್ವಚ್ಛತೆ, ರಸ್ತೆ ದುರಸ್ತಿ, ನೀರಿನ ಸೋರಿಕೆ ತಡೆ ಸೇರಿದಂತೆ ಗ್ರಾಮಾಭಿವೃದ್ಧಿಯ ಹಲವು ಕಾರ್ಯಗಳಲ್ಲಿ ನಾವೇ ಮುಂದೆ ಬಂದು ಸ್ಪಂದಿಸಬಹುದು. ನಾವು ಒಳ್ಳೆಯ ಕಾರ್ಯ ಮಾಡಿದಾಗ ನಂಬಿದ ದೇವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ” ಎಂದರು.


ಸ್ವಚ್ಛತಾ ಕಾರ್ಯದಲ್ಲಿ ಜೆಕೆ ಫ್ರೆಂಡ್ಸ್ ಅಧ್ಯಕ್ಷರ ಕುಟುಂಬದ ಸದಸ್ಯರು ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಕೀಲ ವೆಂಕಟೇಶ್ ಕೋಟ್ಯಾನ್ ತೊಂದಡ್ಪು ಅವರ ಕುಟುಂಬದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಊರಿನ ಜನರ ಒಗ್ಗಟ್ಟು, ಸಾಮಾಜಿಕ ಕಳಕಳಿ ಹಾಗೂ ಸ್ವಯಂಪ್ರೇರಿತ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ :ಜಗದೀಶ್ ಪೂಜಾರಿ
ಕಡಂದಲೆ