ಸಿ.ಪಿ.ಎಡ್. ಪಾಸಾದವರಿಗೂ ಹೈಸ್ಕೂಲ್ ಶಿಕ್ಷಕ ವೃತ್ತಿ : ಸರಕಾರಕ್ಕೆ ಮನವಿ – ಅಭಯಚಂದ್ರ

0
9

ಮೂಡುಬಿದಿರೆ : ಹಿಂದೆ ಅವಿಭಜಿತ ಜಿಲ್ಲೆಯಲ್ಲಿ ನಾಲ್ಕೈದು ಸಿ.ಪಿ.ಎಡ್. ಕಾಲೇಜುಗಳಿದ್ದು ಇಂದು ಮೂಡುಬಿದಿರೆಯ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಮಹಾ ವಿದ್ಯಾಲಯ ಜಿಲ್ಲೆಯಲ್ಲಿ ಉಳಿದಿರುವ ಏಕೈಕ ಸಿ.ಪಿ.ಎಡ್. ಕಾಲೇಜಾಗಿದೆ. ಸಿ.ಪಿ.ಎಡ್. ಪಾಸಾದವರು ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಮತ್ರ ಅರ್ಹರು ಎಂಬ ಸರಕಾರದ ನಿಯಮ ವಿದ್ಯಾರ್ಥಿಗಳ ಕೊರತೆಗೆ ಕಾರಣವಾಗಿದೆ. ಪಿ.ಯು.ಸಿ. ಬಳಿಕ ಸಿ.ಪಿ.ಎಡ್. ಶಿಕ್ಷಣ ಪಡೆಯುವುದು ಡಿಪ್ಲೋಮಾ ಶಿಕ್ಷಣಕ್ಕೆ ಸಮಾನವಾಗಿದ್ದು ಸಿಪಿಎಡ್ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೂ ಹೈಸ್ಕೂಲ್ ಶಿಕ್ಷಕರಾಗಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನುಡಿದರು.

ಇಲ್ಲಿನ ಎಂ. ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘವನ್ನು ಆ. 7ರಂದು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಮಹಾವೀರ ಕಾಲೇಜ್ ಟ್ರಸ್ಟ್ ಕಾರ್ಯದರ್ಶಿ, ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅವರು ಮಾತನಾಡಿ ಸತತ ಶೇ. 100 ಫಲಿತಾಂಶ ಮತ್ತು ಶೇ. 100 ಉದ್ಯೋಗಾವಕಾಶ ಎಂ.ಕೆ. ಅನಂತರಾಜ್ ದೇಹಿಕ ಶಿಕ್ಷಣ ಮಹಾವಿದ್ಯಾಲಯದ ವಿಶೇಷತೆಯಾಗಿದ್ದು ಶಿಸ್ತು ಮತ್ತು ಬದ್ಧತೆಗೆ ಹೆಸರಾಗಿದೆ. ಇಂದು ನಾವು ಎ ಐ ಯುಗದಲ್ಲಿದ್ದು 2028-29ರ ಹೊತ್ತಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಎಐ ಪ್ರಾಮುಖ್ಯತೆ ಪಡೆಯುವ ಸಾಧ್ಯತೆಯಿರುವ ಕಾರಣ ಶಿಕ್ಷಣ ಪದ್ಧತಿಯಲ್ಲಿ ಆಗುವ ಬದಲಾವಣೆಗೆ ಹೊಂದಿಕೊಳ್ಳಲು ವಿದ್ಯಾರ್ಥಿಗಳು ಸಿದ್ಧರಿರಬೇಕು ಎಂದರು.

ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿ ಸಂಘದ ನಾಯಕರಾದವರು ಪ್ರತಿಯೊಬ್ಬ ವಿದ್ಯಾರ್ಥಿಯ ಕುಂದು ಕೊರತೆಗಳನ್ನು ಗಮನಿಸಿ, ತಿಳಿದು ಅಗತ್ಯ ಸಹಕಾರ ನೀಡಲು ಸಿದ್ಧರಿರಬೇಕು ಎಂದರು.

ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯ ಸುರೇಶ್ ಪ್ರಭು ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ಮೂಡುಬಿದಿರೆ ಹೆಸರು ಬೆಳಗುವಲ್ಲಿ ಅಭಯಚಂದ್ರ ಜೈನ್ ಅವರ ಕೊಡುಗೆ ಅಪಾರವಾಗಿದೆ ಎಂದರು.

ಸಂಸ್ಥೆಯ ಹಳೆವಿದ್ಯಾರ್ಥಿ ಉಜಿರೆ ಎಸ್.ಡಿ.ಎಂ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಸಂತ ಹೆಗ್ಡೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಘದ ನಯಕಿ ವೀಕ್ಷಿತಾ ಸ್ವಾಗತಿಸಿದರು. ಸೋಮೇಶ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿದರು. ನಿಖಿತಾ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಸುಶ್ಮಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಆಕರ್ಶ್ ವಿ. ವಂದಿಸಿದರು.