ಇದೊಂದು ವಿಶೇಷ ರೀತಿಯ ಶಿಲೀಂದ್ರಗಳ ಸೋಂಕುವಿನಿಂದ ಉಂಟಾಗುವ ಖಾಯಿಲೆ ಆಗಿರುತ್ತದೆ. ಹೆಚ್ಚಾಗಿ ಬಾಯಿಯೊಳಗೆ ನಾಲಗೆ ಮೇಲ್ಭಾಗದಲ್ಲಿ ದಪ್ಪಗಿನ ಬಿಳಿ ಪದರ ರೀತಿಯಲ್ಲಿ ಈ ಸೋಂಕು ಕಂಡುಬರುತ್ತದೆ.
ಕ್ಯಾಂಡಿಡಾ ಆಲ್ಬಿಕನ್ಸ್ ಎಂಬ ಶಿಲೀಂದ್ರಗಳಿಂದ ಈ ಸೋಂಕು ಉಂಟಾಗುತ್ತದೆ. ಇದೊಂದು ವಿಶೇಷ ರೀತಿಯ ಪರಾವಲಂಬಿ ಜೀವಿಯಾಗಿದ್ದು ನಮ್ಮ ಬಾಯಿಯೊಳಗೆ ನಿರುಪದ್ರವಿ ಜೀವಿಯಂತೆ ಬದುಕುತ್ತದೆ. ದೇಹದ ಪ್ರತಿರೋದಕ ಶಕ್ತಿ ಕುಂಟಿತವಾದಾಗ, ಈ ನಿರುಪದ್ರವಿ ಪರಾವಲಂಬಿ ಜೀವಿಗಳು ತಮ್ಮ ನಿಜರೂಪ ದರ್ಶನವನ್ನು ತೋರಿಸಿ ವಿಜೃಂಭಿಸುತ್ತದೆ. ಹೆಚ್ಚಾಗಿ ಬಾಯಿಯಲ್ಲಿ ಕಂಡುಬರುತ್ತದೆ.
ಹೆಚ್ಚು ಒದ್ದೆ ಇರುವ ಭಾಗಗಳಾದ ಚರ್ಮದ ಸಂದುಗಳಲ್ಲಿ ಮತ್ತು ಮಹಿಳೆಯರ ಜನನಾಂಗದ ಬಳಿಯೂ ಈ ಸೋಂಕು ಕಂಡು ಬರುವ ಸಾದ್ಯತೆ ಇರುತ್ತದೆ. ಬೆರಳುಗಳ ಮತ್ತು ಉಗುರುಗಳ ಸಂಧಿಯಲ್ಲಿಯೂ ಈ ಸೋಂಕು ಕಂಡು ಬರುವ ಸಾದ್ಯತೆ ಇದೆ. ಬಾಯಿಯೊಳಗೆ ಕಂಡು ಬರುವ ಶಿಲೀಂದ್ರಗಳ ಸೋಂಕನ್ನು ‘ಓರಲ್ ಥ್ರಷ್’ ಎಂದೂ ಕರೆಯಲಾಗುತ್ತದೆ.
ಯಾರಿಗೆಲ್ಲಾ ಈ ಸೋಂಕು ಬರಲು ಸಾದ್ಯತೆ ಇದೆ?
ಅತಿಯಾದ ಆಂಟಿಬಯೋಟಿಕ್ ಬಳಸುವಾಗ, ಈ ಶಿಲೀಂದ್ರಗಳ ಮೇಲಿನ ಬ್ಯಾಕ್ಟೀರಿಯಾ ನಿಯಂತ್ರಣ ತಪ್ಪಿ ಹೋಗಿ ಶಿಲೀಂದ್ರಗಳು ಹೆಚ್ಚು ವಿಜೃಂಭಿಸಲು ಆರಂಭಿಸುತ್ತದೆ.
ಅನಿಯಂತ್ರಿತ ಮಧುಮೇಹಿ ರೋಗಿಗಳಲ್ಲಿ ದೇಹದ ರಕ್ಷಣಾ ಶಕ್ತಿ ಕುಂದಿದಾಗ ಶಿಲೀಂದ್ರ ಸೋಂಕು ಹೆಚ್ಚು ಕಂಡು ಬರುತ್ತದೆ. ಏಡ್ಸ್ ಮತ್ತು ಹೆಚ್‍ಐವಿ ಸೋಂಕಿತರಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಶಿಥಿಲವಾದಾಗ ಈ ಕ್ಯಾಂಡಿಡಿಯೋಸಿಸ್ ಸೋಂಕು ಹೆಚ್ಚು ಕಂಡು ಬರುತ್ತದೆ.
ಸಂತಾನ ನಿಯಂತ್ರಣ ಔಷಧಿ ಸೇವಿಸುವವರಲ್ಲಿ ಮತ್ತು ಗರ್ಭಿಣ ಮಹಿಳೆಯರಿಗೆ ಈ ಸೋಂಕು ಬೇಗನೆ ತಗಲುವ ಸಾಧ್ಯತೆ ಇರುತ್ತದೆ. ಕ್ಯಾನ್ಸರ್ ರೋಗಿಗಳಲ್ಲಿ ಕಿಮೋಥೆರಫಿ ಔಷಧಿ ಸೇವಿಸುವವ ರೋಗ ನಿರೋಧಕ ಶಕ್ತಿ ಕುಂದಿದಾಗ ಈ ಸೋಂಕು ಬರುವ ಸಾಧ್ಯತೆ ಇರುತ್ತದೆ. ವಿವಿಧ ಕಾರಣಗಳಿಗಾಗಿ ತಿಂಗಳುಗಳಿಂದ ಸ್ಟಿರಾಯ್ಡು ಸೇವನೆ ಮಾಡುವ ರೋಗಿಗಳಲ್ಲಿ ಈ ಕ್ಯಾಂಡಿಡಿಯೋಸಿಸ್ ಶಿಲೀಂದ್ರ ಸೋಂಕು ಬೇಗನೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತಿಯಾಗಿ ಮಾನಸಿಕ ಒತ್ತಡ ಮತ್ತು ಮಾದಕ ದ್ರವ್ಯ ವ್ಯಸನಿಗಳಲ್ಲಿಯೂ ಈ ಶಿಲೀಂದ್ರ ಸೋಂಕು ಸರ್ವೆ ಸಾಮಾನ್ಯ.
ರೋಗದ ಲಕ್ಷಣಗಳು
ಚರ್ಮ ಕೆಂಪಗಾಗಿ ಊದಿಕೊಳ್ಳುವುದು. ನಂತರ ಗುಳ್ಳೆಗಳು ಕಂಡು ಬರುವುದು.
ಚರ್ಮದಲ್ಲಿ ತುರಿಕೆ, ನೋವು ಮತ್ತು ಉರಿಯೂತ ಕಂಡು ಬರುತ್ತದೆ.
ಬೆರಳುಗಳ ಸಂಧಿಯಲ್ಲಿ, ಉಗುರಿನ ಸುತ್ತಬೆಳ್ಳಗಿನ ಬಿಳಿಯಾದ ಪದರ ಇರುತ್ತದೆ.
ಜನನಾಂಗದಲ್ಲಿ ಈ ಶೀಲಿಂದ್ರ ಸೋಂಕು ಇದ್ದಲ್ಲಿ ಬಿಳಿ ಬಣ್ಣದ ನೀರು ಸೋರುವ ಸಾಧ್ಯತೆ ಇರುತ್ತದೆ.
ಅಸಹ್ಯವಾದ ವಾಸನೆ ಮತ್ತು ಉರಿತ ಇರುತ್ತದೆ.
ಬಾಯಿಯೊಳಗೆ ಈ ಶೀಲಿಂದ್ರ ಸೋಂಕು ಇದ್ದಲ್ಲಿ ಬೆಳ್ಳಗಿನ ದಪ್ಪವಾದ ಬಿಳಿ ಪದರ ನಾಲಗೆ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ. ಬಾಯಿಯ ಇತರ ಭಾಗಗಳಾದ ವಸಡು ಅಂಗಳ ಮತ್ತು ಕೆನ್ನೆಯ ಒಳಭಾಗದಲ್ಲೂ ಕಂಡು ಬರುತ್ತದೆ. ಬಾಯಿಯಲ್ಲಿ ವಾಸನೆ, ಉರಿಯೂತ ನೋವು ಮತ್ತು ತುರಿಕೆ ಕೂಡಾ ಇರುವ ಸಾಧ್ಯತೆ ಇರುತ್ತದೆ.
ಕ್ಯಾಂಡಿಡಾ ಅಲ್ಬಿಕನ್ ಎಂದು ಶೀಲಿಂದ್ರ ಹೆಚ್ಚಾಗಿ ಬಾಯಿಯಲ್ಲಿ ಮತ್ತು ಕ್ಯಾಂಡಿಡಾ ಫಂಗಸ್ ಎಂಬ ಶಿಲೀಂದ್ರ ಚರ್ಮದಲ್ಲಿ ಶಿಲೀಂದ್ರ ಸೋಂಕು ಉಂಟು ಮಾಡುತ್ತದೆ.
ಈ ಎರಡೂ ನಿರುಪದ್ರವಿ ಜೀವಿಗಳು ನಮ್ಮ ದೇಹದ ಇತರ ಆರೋಗ್ಯವಂಥ ನಿರುಪದ್ರವಿ ಬ್ಯಾಕ್ಟೀರಿಯಾ ಜೊತೆಗೆ ನೆಮ್ಮದಿಯಿಂದ ಬಾಳುವೆ ನಡೆಸುತ್ತಿರುತ್ತದೆ. ಆದರೆ ದೇಹದ ರಕ್ಷಣಾ ವ್ಯವಸ್ಥೆ ಕುಂದಿದಾಗ, ಅತಿಯಾದ ಆಂಟಿ ಬಯೋಟಿಕ್ ಸೇವನೆ, ಅತಿಯಾದ ರಸದೂತಗಳ ಬಳಕೆಯಿಂದಾಗಿ, ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳ ನಡುವಿನ ಸೂಕ್ಷವಾದ ಸಮತೋಲನ ಕಳೆದು ಹೋಗಿ, ಈ ಶೀಲಿಂದ್ರಗಳ ಅನಿಯಂತ್ರಿತವಾಗಿ ಬೆಳೆದುಕೊಂಡು, ತನ್ನ ಸಂಖ್ಯೆಯನ್ನು ವೇಗವಾಗಿ ವೃದ್ಧಿಸಿಕೊಂಡು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರು ತಕ್ಷಣವೇ ಗುರುತಿಸಿ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡಿದಲ್ಲಿ ಶಿಲೀಂದ್ರಗಳ ಸೋಂಕನ್ನು ನಿಯಂತ್ರಿಸಬಹುದಾಗಿದೆ.
ಇಲ್ಲವಾದಲ್ಲಿ ಈ ಶೀಲಿಂದ್ರಗಳು ರಕ್ತಕ್ಕೆ ಸೇರಿಕೊಂಡು, ರಕ್ತದಲ್ಲಿ ಸೋಂಕು ಉಂಟು ಮಾಡಿ ದೇಹದ ಇತರ ಭಾಗಗಳಿಗೂ ಹರಡಿ ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ತಕ್ಷಣವೇ ಗುರುತಿಸಿ, ಒಳರೋಗಿಯಾಗಿ ದಾಖಲು ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ.
ಪತ್ತೆ ಹಚ್ಚುವುದು ಹೇಗೆ?
ರೋಗಿಯ ರೋಗದ ಚರಿತ್ರೆಯನ್ನು, ಔಷಧಿಗಳ ಚರಿತ್ರೆಯನ್ನು ವೈದ್ಯರು ಕೂಲಂಕುಷವಾಗಿ ಪರಿಶೀಲಿ, ರೋಗದ ಲಕ್ಷಣಗಳನ್ನು ಅಭ್ಯಸಿಸಿ ರೋಗ ನಿರ್ಣಯ ಮಾಡುತ್ತಾರೆ. ಯಾವುದೇ ವಿಶೇಷ ರೀತಿಯ ಪರೀಕ್ಷೆ ಅಗತ್ಯವಿರುವುದಿಲ್ಲ. ಅಗತ್ಯವಿದ್ದಲ್ಲಿ ರಕ್ತ ಪರೀಕ್ಷೆ ಮಾಡಿ ಬಿಳಿ ಕರ್ತ ಕಣಗಳ ಸಂಖ್ಯೆಯನ್ನು ಪರಿಶೀಲಿಸಿ ರೋಗ ನಿರ್ಣಯ ಮಾಡಲಾಗುತ್ತದೆ.
ಚಿಕಿತ್ಸೆ ಹೇಗೆ?
ಈ ಶೀಲೀಂದ್ರಗಳ ಸೋಂಕು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಸೋಂಕಿನ ತೀವ್ರತೆಯನ್ನು ಮತ್ತು ರೋಗದ ಲಕ್ಷಣಗಳ ತೀವ್ರತೆಯನ್ನು ಪರಿಗಣ ಸಿ ರೋಗಿಯನ್ನು ಒಳರೋಗಿಯಾಗಿ ದಾಖಲಿಸಿ, ಆಂಟಿ ಫಂಗಲ್ ಅಂದರೆ ಶೀಲಿಂದ್ರ ನಿವಾರಕ ಔಷಧಿಗಳನ್ನು ರಕ್ತನಾಳಗಳ ಮುಖಾಂತರ ನೀಡಿದಲ್ಲಿ ಈ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ. ಅದೇ ರೀತಿ ಕಾಯಿಲೆಗೆ ಕಾರಣವಾದ ಅಂಶಗಳ ಬಗ್ಗೆ ನಿಗಾ ವಹಿಸಿ ಅದಕ್ಕೂ ಸೂಕ್ತ ಚಿಕಿತ್ಸೆ ನೀಡತಕ್ಕದ್ದು. ಅನಿಯಂತ್ರಿತ ಮಧುಮೇಹ ಇದ್ದಲ್ಲಿ ಅದನ್ನೂ ನಿಯಂತ್ರಿಸಬೇಕು. ಜೊತೆಗೆ ಜ್ವರ, ನೋವಿನ ಔಷಧಿಗಳನ್ನು ಮತ್ತು ದೇಹಕ್ಕೆ ಅಗತ್ಯವಾದ ವಿಟಮಿನ್ಸ್ ಮತ್ತು ಖನಿಜಾಂಶಗಳನ್ನು ರಕ್ತನಾಳಗಳ ಮುಖಾಂತರ ನೀಡಿ ರೋಗಿ ಬೇಗ ಚೇತರಿಸಿಕೊಳ್ಳುವಂತೆ ಮಾಡಲಾಗುತ್ತದೆ. ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚು ಬಲಿಷ್ಠವಾಗಿಸಲು ಪೂರಕವಾದ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿದಾಗ ಶಿಲೀಂದ್ರಗಳ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ.
‘ಕ್ಯಾಂಡಿಡಿಯೋಸಿಸ್’ ಎಂಬ ಅವಕಾಶವಾದಿ ಶಿಲೀಂದ್ರಗಳ ಸೋಂಕು ಅಷ್ಟೇನೂ ಅಪಾಯಕಾರಿಯಾದ ರೋಗ ಅಲ್ಲದಿದ್ದರೂ, ಅವಕಾಶ ಸಿಕ್ಕಿದಾಗಲೆಲ್ಲಾ ತಾನು ಜೀವಿಸುವ ಮತ್ತು ವಾಸಿಸುವ ವ್ಯಕ್ತಿಗೆ ಕಾಡುವ ಮನೆ ಮುರುಕು ಕೆಲಸವನ್ನು ಮಾಡುತ್ತದೆ. ತಕ್ಷಣವೇ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಮುಖವಾಗುವ ಎಲ್ಲಾ ಸಾದ್ಯತೆಗಳು ಇದೆ. ಆದರೆ ನಿರ್ಲಿಕ್ಷ ವಹಿಸಿ ಸ್ವಯಂ ಮುದ್ದುಗಾರಿಕೆ ಮಾಡಿ ಉಡಾಫೆ ತೋರಿದಲ್ಲಿ ಮಾರಣಾಂತಿಕವಾಗಿ ಕಾಡುವ ಸಾಧ್ಯತೆಗಳೂ ಇದೆ. ಈ ಕಾರಣದಿಂದ ನಿರ್ಲಕ್ಷ ಮಾಡದೆ ತಕ್ಷಣವೇ ತನ್ನ ವೈದ್ಯರ ಸಲಹೆ ಪಡೆದು ಗುಣಮುಖವಾಗುದರಲ್ಲಿಯೇ ಜಾಣತನ ಅಡಗಿದೆ.
ಡಾ|| ಮುರಲೀ ಮೋಹನ್‍ಚೂಂತಾರು

