ಬ್ರಹ್ಮಾವರ : ತಾಲೂಕಿನ ಉಪ್ಪೂರು ಗ್ರಾಮದ ಉಪ್ಪೂರು ಪ್ರದೇಶದಲ್ಲಿ ಕಳೆದ ರಾತ್ರಿ ಚಿರತೆ ಹಾವಳಿ ಕಂಡುಬಂದಿದ್ದು, ಸ್ಥಳೀಯ ನಿವಾಸಿಗಳು ಭೀತಿಗೊಂಡ ಘಟನೆ ನಡೆದಿದೆ.
ದಿವಂಗತ ಶೇಷ ನಾಯ್ಕ್ ಹಾಗೂ ದಿವಂಗತ ಸಂಜೀವ ನಾಯ್ಕ್ ಅವರ ಕುಟುಂಬದ ಶಾಮ್ ನಾಯ್ಕ ಹಾಗೂ ಮಧುಸೂದನ್ ನಾಯ್ಕ ಅವರ ಮನೆಯ ಸುತ್ತಮುತ್ತ ಚಿರತೆ ಓಡಾಟ ಕಂಡುಬಂದಿದೆ. ರಾತ್ರಿ ಸಮಯದಲ್ಲಿ ಚಿರತೆ ದಾಳಿ ನಡೆಸಿ ಮನೆಯ ಸಾಕು ನಾಯಿಯನ್ನು ಕೊಂದು, ಅದರ ಮರಿಗಳನ್ನು ಕೊಂಡೊಯ್ದಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಪ್ರದೇಶವು ಅರಣ್ಯಕ್ಕೆ ಹೊಂದಿಕೊಂಡಿದ್ದು, ಸುತ್ತಮುತ್ತ ದಟ್ಟವಾದ ಕಾಡು ಪ್ರದೇಶವಿದೆ ಎಂದು ತಿಳಿದುಬಂದಿದೆ. ಪ್ರತಿ ರಾತ್ರಿ ಚಿರತೆ ಹಾಗೂ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗುತ್ತಿರುವುದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿ ಪೊದೆಗಳು ಹೆಚ್ಚಾಗಿ ಬೆಳೆದಿದ್ದು, ಸರಿಯಾದ ಬೀದಿ ದೀಪ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಮಣಿಪಾಲ KMC ಆಸ್ಪತ್ರೆಗೆ ಸೇರಿದಂತೆ ಈ ಮಾರ್ಗವಾಗಿ ಸಾವಿರಾರು ಜನ ಸಂಚಾರ ಮಾಡುವುದರಿಂದ ರಾತ್ರಿ ವೇಳೆ ವಿಶೇಷ ಎಚ್ಚರಿಕೆ ಅಗತ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬಿದರು. ನಂತರ ಅವರು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಂಪರ್ಕಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಚಿರತೆ ಹಿಡಿಯಲು ಪಂಜರ ಅಳವಡಿಕೆ ಹಾಗೂ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ಸಮಾಜಸೇವಕರು ಆಗ್ರಹಿಸಿದ್ದಾರೆ. ಕೂಡಲೇ ಸಮಸ್ಯೆಗೆ ಪರಿಹಾರ ಕಂಡು, ಭಯಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

