
ಸೀತಾಂಗೋಳಿ–ಪೆರ್ಲ ರಸ್ತೆಯ ಪುತ್ತಿಗೆ ಮುಗುರೋಡ್ ಎಂಬಲ್ಲಿ ಇಂದು (ಅ.1) ಮಧ್ಯಾಹ್ನ ಸಂಭವಿಸಿದ ಬೈಕ್–ಕಾರ್ ಮುಖಾಮುಖಿ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಊಞಂಪದವು ನಿವಾಸಿ ಎಂ.ಟಿ. ಮುಹಮ್ಮದ್ ಅಶ್ರಫ್ (48) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರ ಪತ್ನಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮುಹಮ್ಮದ್ ಅಶ್ರಫ್ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಢಿಕ್ಕಿಯ ಪರಿಣಾಮ ಅಶ್ರಫ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಅಪಘಾತದ ನಿಖರ ಕಾರಣ ತಿಳಿದುಬರಬೇಕಿದೆ.
