
ಉಪ್ಪಿನಂಗಡಿ : ಮರಳಿನ ಕಲೆಯಲ್ಲಿ ಅಪೂರ್ವ ಪ್ರತಿಭೆ ಪ್ರದರ್ಶಿಸಿರುವ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರು ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಇಂದ್ರಪ್ರಸ್ಥ ವಿದ್ಯಾಲಯದ 6ನೇ ತರಗತಿಯ ಆನ್ಶಿ ಸಂತೋಷ್‌ಕುಮಾರ್ ಹಾಗೂ 3ನೇ ತರಗತಿಯ ಹಿಮಾಂಶು ಕೃಷ್ಣ ಅಮ್ಮಣ್ಣಾಯ ಅವರು ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಇವರಿಬ್ಬರೂ ಪುತ್ತೂರಿನ **ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ (ರಿ.)**ಯ ತರಬೇತುದಾರ ಪ್ರವೀಣ್ ವರ್ಣಕುಟೀರ ಅವರ ಮಾರ್ಗದರ್ಶನದಲ್ಲಿ ಕಲಾಭ್ಯಾಸ ಮಾಡುತ್ತಿದ್ದಾರೆ.
ಆನ್ಶಿ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರಂತರ 30 ಗಂಟೆಗಳ ಕಾಲ ಹಾಡಿನ ಭಾವಕ್ಕೆ ಅನುಗುಣವಾಗಿ ವೈವಿಧ್ಯಮಯ ಹಾಗೂ ಸೃಜನಾತ್ಮಕ ಕಲಾಕೃತಿಗಳನ್ನು ಮರಳಿನಲ್ಲಿ ರಚಿಸುವ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ. ಮತ್ತೊಂದೆಡೆ, ಹಿಮಾಂಶು ಅವರು 18 ಗಂಟೆಗಳ ಕಾಲ ನಿರಂತರವಾಗಿ ಸ್ಯಾಂಡ್ ಆರ್ಟ್ ಮಾಡುವ ಮೂಲಕ ವಿಶಿಷ್ಟ ಸಾಧನೆ ದಾಖಲಿಸಿದ್ದಾರೆ.
ಕಿರಿಯ ವಯಸ್ಸಿನಲ್ಲಿಯೇ ಸತತ ಪರಿಶ್ರಮ, ಏಕಾಗ್ರತೆ ಹಾಗೂ ಸೃಜನಶೀಲತೆಯಿಂದ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ವಿದ್ಯಾರ್ಥಿಗಳ ಸಾಧನೆಗೆ ವಿವಿಧೆಡೆಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.
ಆನ್ಶಿ ಅವರು ಉಪ್ಪಿನಂಗಡಿ ಸಮೀಪದ ಸೂರಪ್ಪ ಕಂಪೌಂಡ್‌ನ ಅಭಿನಿತಾ ಎಂ.ಜಿ. ಅವರ ಪುತ್ರಿಯಾಗಿದ್ದು, ಹಿಮಾಂಶು ಅವರು ಇಳಂತಿಲ ಸಮೀಪದ ಎನ್ಮಾಡಿಯ ಗುರುಮೂರ್ತಿ ಎಂ. ಅಮ್ಮಣ್ಣಾಯ ಮತ್ತು ಅನುಷಾ ಎಸ್. ಅವರ ಪುತ್ರರಾಗಿದ್ದಾರೆ.
