ಉಡುಪಿ: ಅಮಾಯಕ ರಿಕ್ಷಾ ಚಾಲಕನ ಮೇಲೆ ಹೂಡಲಾಗಿದ್ದ ಆಧಾರರಹಿತ ಕ್ರಿಮಿನಲ್ ದಾವೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿದ್ದು, ಪೊಲೀಸರ ಸುಳ್ಳು ಪ್ರಕರಣದಿಂದ ತೀವ್ರ ಮಾನಸಿಕ ಕಿರಿಕಿರಿ ಅನುಭವಿಸಿರುವ ಶೀನ ಪೂಜಾರಿ ಅವರಿಗೆ ನ್ಯಾಯ ಒದಗಿಸಲು ಗಂಗೊಳ್ಳಿ ಪೊಲೀಸರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಶೀನ ಪೂಜಾರಿ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು, ಕಳೆದ ವರ್ಷ ಆಗಸ್ಟ್ನಲ್ಲಿ ಆಲೂರಿನ ಉದಯ ಶೆಟ್ಟಿ ಎಂಬುವವರು ಗಂಗೊಳ್ಳಿಗೆ ಹೋಗಲು ಶೀನ ಪೂಜಾರಿ ಅವರ ರಿಕ್ಷಾವನ್ನು ಬಾಡಿಗೆಗೆ ಗೊತ್ತುಮಾಡಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯ ಹೊರಗಡೆ ರಿಕ್ಷಾ ನಿಲ್ಲಿಸಿ ಉದಯ ಶೆಟ್ಟಿಯವರು ಒಳಗೆ ತೆರಳಿದ್ದರು. ಸ್ವಲ್ಪಸಮಯದ ನಂತರ ಹೊರಬಂದ ಪೊಲೀಸರು, ಶೀನ ಪೂಜಾರಿಯವರನ್ನು ಠಾಣೆಯೊಳಗೆ ಕರೆದೊಯ್ದು, ಓದಲು-ಬರೆಯಲು ಬಾರದ ಅವರಿಂದ ದಾಖಲೆಯೊಂದಕ್ಕೆ ಸಹಿ ಹಾಗೂ ಆಧಾರ್ ಕಾರ್ಡ್ ಪ್ರತಿ ಪಡೆದುಕೊಂಡಿದ್ದರು ಎಂದು ಮಾಹಿತಿ ನೀಡಿದರು.
2ನೇ ಆರೋಪಿ ಮಾಡಿದ ಪೊಲೀಸರು
ಘಟನೆ ನಡೆದ ಎರಡು ತಿಂಗಳ ನಂತರ ಕುಂದಾಪುರ ನ್ಯಾಯಾಲಯದಲ್ಲಿ ಕ್ರಿಮಿನಲ್ ದಾವೆ ಹೂಡಲಾಗಿರುವ ನೋಟಿಸ್ ಶೀನ ಪೂಜಾರಿಯವರಿಗೆ ತಲುಪಿತು. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕದ್ದಿರುವ ಆರೋಪದಲ್ಲಿ ಉದಯ ಶೆಟ್ಟಿಯವರನ್ನು 1ನೇ ಆಪಾದಿತ ಹಾಗೂ ಶೀನ ಪೂಜಾರಿಯವರನ್ನು ಎರಡನೇ ಆಪಾದಿತರನ್ನಾಗಿ ಮಾಡಲಾಗಿತ್ತು. ಈ ಬಗ್ಗೆ ಪೊಲೀಸರ ಬಳಿ ವಿಚಾರಿಸಿದಾಗ ಇದು ಸಣ್ಣ ಕೇಸು, ದಂಡ ಕಟ್ಟಿ ಮುಗಿಸಬಹುದು ಎಂದು ಸಲಹೆ ನೀಡಿದರು. ಆದರೆ ಮಾಡದ ತಪ್ಪನ್ನು ಒಪ್ಪಿಕೊಳ್ಳಲು ಶೀನ ಪೂಜಾರಿಯವರ ಆತ್ಮಸಾಕ್ಷಿ ಒಪ್ಪಲಿಲ್ಲ. ವಿದ್ಯಾರ್ಥಿ ಸಲಹೆಯಂತೆ ಅವರು ಪ್ರತಿಷ್ಠಾನವನ್ನು ಸಂಪರ್ಕಿಸಿದ್ದರು ಎಂದರು.
ಕಾನೂನು ಹೋರಾಟ
ಪೊಲೀಸರು ಶೀನ ಪೂಜಾರಿಯವರಿಂದ “ಸ್ವಖುಷಿ ಹೇಳಿಕೆ” ಎಂಬ ಹೆಸರಿನಲ್ಲಿ ಸುಳ್ಳು ಪತ್ರಕ್ಕೆ ಸಹಿ ಪಡೆದಿರುವುದು ಬೆಳಕಿಗೆ ಬಂದ ಕಾರಣ ಉಚ್ಚ ನ್ಯಾಯಾಲಯದಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಗಂಗೊಳ್ಳಿ ಠಾಣೆಗೆ ನೋಟಿಸ್ ಜಾರಿಗೊಳಿಸಿತು. ನಾಲ್ಕು ಬಾರಿ ಅವಕಾಶ ನೀಡಿದರೂ ಪೊಲೀಸರಿಂದ ಯಾವುದೇ ಸೂಕ್ತ ಉತ್ತರ ಬಾರದಿದ್ದಾಗ, ಆ. 6ರಂದು ಅಂತಿಮ ಆದೇಶ ನೀಡಿ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಸಾರ್ವಜನಿಕರು ಯಾವುದೇ ಪತ್ರಕ್ಕೆ ಸಹಿ ಮಾಡುವ ಮುನ್ನ ಸಂಪೂರ್ಣ ಓದಿ ತಿಳಿದುಕೊಳ್ಳಬೇಕು. ಅಥವಾ ವಕೀಲರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ರಿಕ್ಷಾ ಚಾಲಕ ಶೀನಪೂಜಾರಿ, ಪ್ರತಿಷ್ಠಾನ ಕಾರ್ಯದರ್ಶಿ ಅನಿಲ್ ದೇವಾಡಿಗ ಉಪಸ್ಥಿತರಿದ್ದರು.

