ಉಡುಪಿ: ಪಾಕಿಸ್ತಾನದಿಂದ ಹಿಂದುಗಳು ಭಾರತ ವಿಭಜನೆ ಹಾಗೂ ನಂತರದ ವರ್ಷಗಳಲ್ಲಿ ಬಂದು ನೆಲೆಸಿದ ದೆಹಲಿಯ ಅತೀ ದೊಡ್ಡ ಸ್ಲಮ್ ಏರಿಯಾ ಎಂದೇ ಪರಿಚಿತವಾದ ಭಾಟಿ ಮೈನ್ಸ್ ಬಡಾವಣೆಗೆ ಭಾನುವಾರ ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಭೇಟಿ ನೀಡಿದರು.
ಚಾತುಮಾರ್ಸ್ಯದ ಅಂಗವಾಗಿ ವಿಶ್ವ ಹಿಂದು ಪರಿಷತ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಹಮ್ಮಿಕೊಂಡ ಸೇವಾ ಬಸ್ತಿ ಭೇಟಿ ಅಭಿಯಾನ ಅಂಗವಾಗಿ ಕಾರ್ಯಕ್ರಮ ನಡೆಯಿತು.
ಆರಂಭದಲ್ಲಿ 5 ಮನೆಗಳಿಗೆ ತೆರಳಿ ಅಯೋಧ್ಯಾ ರಾಮ ಮತ್ತು ಉಡುಪಿ ಕೃಷ್ಣನ ಫೋಟೋ ಕೊಟ್ಟು ರಾಮದೀಪವನ್ನು ಬೆಳಗಿ , ಜನ್ಮಾಷ್ಟಮೀ ಪ್ರಸಾದ ವಿತರಿಸಿ ರಾಮತಾರಕ ಮಂತ್ರ ಉಪದೇಶಿಸಿದರು.
ಬಡಾವಣೆಯಲ್ಲಿನ ನೀರು ವಿದ್ಯುತ್ , ಶಾಲೆ ಆಸ್ಪತ್ರೆ, ರಸ್ತೆ, ಒಳಚರಂಡಿ ವ್ಯವಸ್ಥೆ ಇತ್ಯಾದಿ ಮೂಲಭೂತ ಸೌಕರ್ಯಗಳ ಬಗ್ಗೆ ಕೇಳಿ ಮಾಹಿತಿ ಪಡೆದರು. ಬಳಿಕ ಸನಾತನ ಧರ್ಮದ ಪಾಲನೆ , ನಿತ್ಯ ದೇವರ ನಾಮಸ್ಮರಣೆ , ಕರ್ತವ್ಯ ಹಾಗೂ ರಾಷ್ಟ್ರ ನಿಷೆ್ಠೆ ಇತ್ಯಾದಿಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ತಿಳಿಸಿದರು. ಪ್ರತಿ ಮನೆ, ಕೇರಿ, ಬಡಾವಣೆಯ ಸ್ವಚ್ಛತೆಯ ಪಾಲನೆ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ , ಸಂಸ್ಕಾರ ನೀಡಬೇಕು, ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದರು. ನಂತರ ಬಡಾವಣೆಯ ಮಂದಿರದ ಆವರಣದಲ್ಲಿ ಸೇರಿದ್ದ 500ಕ್ಕೂ ಅಧಿಕ ಜನರಿಗೆ ರಾಮಮಂತ್ರೋಪದೇಶ, ಧರ್ಮಸಂದೇಶ ನೀಡಿದರು.
8 ಶತಮಾನಗಳ ಪರಂಪರೆಯ ಸ್ಬಾಮೀಜಿಯೊಬ್ಬರು ನಮ್ಮ ಮನೆ , ಕೇರಿಗೆ ಬಾಗಿಲಿಗೆ ಬರುವುದನ್ನೂ ನಾವು ಯಾರೂ ಯೋಚಿಸಿರಲಿಲ್ಲ . ಇವತ್ತಿನ ದಿನ ನಮಗೆಲ್ಲ ಪಾವನ ಅನುಭವವನ್ನು ತಂದಿದೆ. ಗುರುಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಬೇಕು ಎಂದು ಸಮಾಜದ ಮುಂದಾಳುಗಳು ಆಶಿಸಿದರು.
ವಿಹಿಂಪ ಪರಿಷತ್ತಿನ ಪ್ರಾಂತ ಸಂಘಟನಾ ಕಾರ್ಯದರ್ಶಿ ಸುಬೋಧ್ ಜಿ., ಲಕ್ಷ$್ಮಣ್ ಜಿ., ಅಭಿಷೇಕ್ ಮೊದಲಾದವರಿದ್ದರು.

