
ಕಾರ್ಕಳ: ಯಾವುದೇ ಅನುಮತಿ ಪಡೆಯದೆ ಆತ್ಮರಕ್ಷಣೆಗಾಗಿ ಹೊಂದಿದ್ದ ರೈಫಲ್‌ಗೆ ಟೆಲಿಸ್ಕೋಪ್ ಅಳವಡಿಸಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೌಡೂರು ನಿವಾಸಿ ದಿನೇಶ್ ಶೆಟ್ಟಿ ಅವರು ಆತ್ಮರಕ್ಷಣೆಗಾಗಿ ಎನ್‌ಪಿಬಿ ರೈಫಲ್‌ವೊಂದನ್ನು ಹೊಂದಿದ್ದು, ಅದಕ್ಕೆ ಮಾನ್ಯ ಪರವಾನಗಿ ಹೊಂದಿದ್ದರು. ರೈಫಲ್‌ನ ಬೇರಿಂಗ್ ನಂಬರ್ 12669 ಆಗಿದ್ದು, ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಆತ್ಮರಕ್ಷಣೆಗಾಗಿ ನೀಡಲಾಗಿದ್ದ ಪರವಾನಗಿ 31-12-2027ರವರೆಗೆ ಊರ್ಜಿತದಲ್ಲಿದೆ ಎಂದು ತಿಳಿದುಬಂದಿದೆ.
ದಿನೇಶ್ ಶೆಟ್ಟಿಯವರು ತಮ್ಮ ರೈಫಲ್ ಅನ್ನು ಪೊಲೀಸ್ ಠಾಣೆಯಲ್ಲಿ ಠೇವಣಿಯಾಗಿ ಇರಿಸಿದ್ದರು. ಉಡುಪಿ ಜಿಲ್ಲಾ ಸಶಸ್ತ್ರ ವಿಭಾಗದ ಸಿಬ್ಬಂದಿ ಠೇವಣಿಯಲ್ಲಿದ್ದ ಬಂದೂಕುಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ, ರೈಫಲ್‌ಗೆ ಹೆಚ್ಚುವರಿಯಾಗಿ ಟೆಲಿಸ್ಕೋಪ್ ಅಳವಡಿಸಿರುವುದು ಪತ್ತೆಯಾಗಿದೆ.
ಅವರಿಗೆ ನೀಡಲಾಗಿರುವ ಪರವಾನಗಿಯಲ್ಲಿ ರೈಫಲ್‌ಗೆ ಟೆಲಿಸ್ಕೋಪ್ ಅಳವಡಿಸಲು ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ರೈಫಲ್‌ಗೆ ಟೆಲಿಸ್ಕೋಪ್ ಅಳವಡಿಸಿ ಮಾರ್ಪಾಡು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
