ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಸಮಿತಿ ರಚನೆಗೆ ಶರತ್ ಡಿ. ಶೆಟ್ಟಿ ಸ್ವಾಗತ

0
1


ಮೂಡುಬಿದಿರೆ: ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿ ರಚಿಸಿರುವುದನ್ನು ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಡಿ. ಶೆಟ್ಟಿ ಸ್ವಾಗತಿಸಿದ್ದಾರೆ.
ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯತೆ ಕುರಿತು ಹಲವು ವರ್ಷಗಳಿಂದ ವಿವಿಧ ವಕೀಲರ ಸಂಘಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಅಥವಾ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಕಕ್ಷಿದಾರರು ನ್ಯಾಯಾಂಗ ಸೇವೆ ಪಡೆಯಲು ದೂರದ ಬೆಂಗಳೂರಿಗೆ ಸೇರಿದಂತೆ ಇತರ ಸ್ಥಳಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಕಡಿಮೆಯಾಗಲಿದೆ. ಇದರಿಂದ ವಕೀಲರು ಹಾಗೂ ಕಕ್ಷಿದಾರರ ಅಮೂಲ್ಯ ಸಮಯದ ಉಳಿತಾಯವಾಗುವುದರ ಜೊತೆಗೆ ಪ್ರಯಾಣದ ವೆಚ್ಚವೂ ಕಡಿಮೆಯಾಗಲಿದೆ ಎಂದು ಶರತ್ ಡಿ. ಶೆಟ್ಟಿ ತಿಳಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನು ಶಿವರಾಮನ್, ಎಸ್.ಜಿ. ಪಂಡಿತ್ ಹಾಗೂ ಮುಹಮ್ಮದ್ ನವಾಝ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಸಮಿತಿಯು ಸಂಬಂಧಪಟ್ಟ ವಕೀಲರ ಸಂಘಗಳು, ನ್ಯಾಯಾಂಗ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಇತರ ಪಾಲುದಾರರ ಅಭಿಪ್ರಾಯಗಳನ್ನು ಪಡೆದು, ಲಭ್ಯವಿರುವ ವಾಸ್ತವಾಂಶಗಳು ಮತ್ತು ಅಗತ್ಯ ಮಾಹಿತಿಗಳ ಆಧಾರದ ಮೇಲೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನ್ಯಾಯಾಂಗ ವ್ಯವಸ್ಥೆಯ ಅಗತ್ಯತೆ, ಪ್ರಕರಣಗಳ ಸಂಖ್ಯೆ, ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ದೊರೆಯಬಹುದಾದ ಅನುಕೂಲಗಳು, ವಕೀಲರ ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಸಮಿತಿಗೆ ಸಮಗ್ರ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಮೂಡುಬಿದಿರೆ ವಕೀಲರ ಸಂಘವೂ ಅಗತ್ಯ ಸಹಕಾರ ನೀಡಲಿದೆ ಎಂದು ಶರತ್ ಡಿ. ಶೆಟ್ಟಿ ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ನ್ಯಾಯಾಂಗ ಸೇವೆಗಳನ್ನು ಜನರ ಸಮೀಪಕ್ಕೆ ತರುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.