ಮೂಡುಬಿದಿರೆ ಜೈನಕಾಶಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಸಪ್ತಮಿ ಆಚರಣೆ

0
14

ಮೂಡುಬಿದಿರೆ: ಜೈನಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡುಬಿದಿರೆಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಸಪ್ತಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಆಗಸ್ಟ್ 19ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀಮಠ ಹಾಗೂ ಗುರುಬಸದಿಯಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಭಾರತದ ಪ್ರಾಚೀನ ಪವಿತ್ರ ತೀರ್ಥ ಕಾಶಿಯ ರಾಜ ಅಶ್ವಸೇನ ಹಾಗೂ ವಾಮಾದೇವಿಯ ಪುತ್ರರಾದ ಪಾರ್ಶ್ವಕುಮಾರರು ಆತ್ಮಕಲ್ಯಾಣ ಹಾಗೂ ಲೋಕಕಲ್ಯಾಣದ ಉದ್ದೇಶದಿಂದ ದೀಕ್ಷೆ ಪಡೆದು, ಶ್ರಾವಣ ಸಪ್ತಮಿಯಂದು ಮೋಕ್ಷವನ್ನು ಪಡೆದರೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ದಿನವನ್ನು ಮೋಕ್ಷ ಸಪ್ತಮಿಯಾಗಿ ಆಚರಿಸಲಾಗುತ್ತದೆ.

ಬೆಳಿಗ್ಗೆ 8 ಗಂಟೆಗೆ ಜಗದ್ಗುರು ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಗುರುಬಸದಿ ಹಾಗೂ ಕ್ಷೇತ್ರದ ಮೂಲಸ್ವಾಮಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಮಸ್ತಕಾಭಿಷೇಕ ನೆರವೇರಿಸಿ, ಅಷ್ಟವಿಧಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.

ಭಗವಾನ್ ಪಾರ್ಶ್ವನಾಥರು ಜೈನ ಧರ್ಮದ 23ನೇ ತೀರ್ಥಂಕರರಾಗಿದ್ದು, ಜಾರ್ಖಂಡ್ ರಾಜ್ಯದ ಮಧುಬನ್ ಸಮೀಪದಲ್ಲಿರುವ ಶಾಶ್ವತ ತೀರ್ಥಕ್ಷೇತ್ರ ಸಮ್ಮೇದಗಿರಿಯ ಸುವರ್ಣಭದ್ರ ಕೂಟದಲ್ಲಿ ನಿರ್ವಾಣ ಹೊಂದಿದರೆಂದು ಜೈನ ಪರಂಪರೆ ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಮೋಕ್ಷ ಕಲ್ಯಾಣದ ಸ್ಮರಣಾರ್ಥ 2803ನೇ ಮಹಾ ಅರ್ಘ್ಯವನ್ನು ಸಮರ್ಪಿಸಲಾಯಿತು.

ಭಗವಾನ್ ಪಾರ್ಶ್ವನಾಥರು ಭಗವಾನ್ ಮಹಾವೀರ ಸ್ವಾಮಿಗಿಂತ ಸುಮಾರು 250 ವರ್ಷಗಳಷ್ಟು ಪೂರ್ವದಲ್ಲಿ ಇದ್ದರೆಂದು ಜೈನ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಮೂಡುಬಿದಿರೆಯ ಪ್ರಾಚೀನ ಹೆಸರು ಪಾರ್ಶ್ವಪುರವಾಗಿದ್ದು, ಇಲ್ಲಿರುವ ಸುಮಾರು 12 ಅಡಿ ಎತ್ತರದ ಕೃಷ್ಣಶಿಲೆಯ ಸುಂದರ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಬಿಂಬದ ಕಾರಣದಿಂದ ಈ ಪ್ರದೇಶ ಪಾರ್ಶ್ವಪುರವೆಂದು ಪ್ರಸಿದ್ಧವಾಗಿತ್ತು ಎಂಬ ಪ್ರತೀತಿ ಇದೆ.

ಈ ಸಂದರ್ಭದಲ್ಲಿ ಸ್ಥಳೀಯ ಮಹಿಳಾ ಸಮಾಜದ ಸದಸ್ಯರು ಸಾಮೂಹಿಕ ಪೂಜೆ ಹಾಗೂ ಮಹಾ ಅರ್ಘ್ಯ ಸಮರ್ಪಿಸಿ ಧರ್ಮಲಾಭ ಪಡೆದರು. ಭಕ್ತರು ಹಾಗೂ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆಗಳಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶಂಭವ ಕುಮಾರ್, ವೀರೇಂದ್ರ, ಸನತ್ ಕುಮಾರ್, ವೀಣಾ ರಘುಚಂದ್ರ, ಮಂಜುಳಾ ಅಭಯಚಂದ್ರ, ದಿವ್ಯಾ, ಆರತಿ ಪುರೋಹಿತ, ವಿರಾಜ್ ಇಂದ್ರ ಸೇರಿದಂತೆ ಹಲವು ಭಕ್ತರು ಹಾಗೂ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.