
ಬಂಟ್ವಾಳ : ಸತತ ಪರಿಶ್ರಮ ಹಾಗೂ ಸಾಧನೆಗಳ ಮೂಲಕ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯನಾಗಿ ಬೆಳೆಯಬಹುದು ಎಂಬುದನ್ನು ಮಹರ್ಷಿ ವಾಲ್ಮೀಕಿಯವರ ಜೀವನವನ್ನು ಅಧ್ಯಯನ ಮಾಡಿದಾಗ ತಿಳಿಯಬಹುದು ಎಂದು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಡಿ. ಮಂಚಿ ಹೇಳಿದರು.
ಇವರು ಕಾಲೇಜಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕೋಶ ಮತ್ತು ಐ.ಕ್ಯೂ.ಎ.ಸಿ. (IQAC) ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್.ವಿ. ಕಾಶೀನಾಥ ಶಾಸ್ತ್ರಿ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಆದಿಕಾವ್ಯವಾಗಿದ್ದು, ಅದರಲ್ಲಿರುವ ಪ್ರತಿಯೊಂದು ಪಾತ್ರವೂ ಬದುಕಿಗೆ ಒಂದೊಂದು ಮೌಲ್ಯವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ರಾಮಾಯಣದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕೋಶದ ಸಂಯೋಜಕರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವಿನಯ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಪ್ರೀತ್ ಕಡಕೋಳ್ ವಂದಿಸಿದರು.
