ಬಾಲ್ಯದ ಪೋಷಣೆ ಮತ್ತು ಉತ್ತಮ ಮಾರ್ಗದರ್ಶನ ಮಹತ್ವದ್ದು. -ಡಾ. ವೈ ಭರತ್ ಶೆಟ್ಟಿ

0
54

ಕೈಕಂಬ : ಮಕ್ಕಳು ಹಸಿ ಮಣ್ಣಿನ ಗೋಡೆಯಂತೆ ಅಲ್ಲಿ ನಾವು ಏನನ್ನು ಎಸೆಯುತ್ತೇವೋ ಅದು ಹಾಗೆಯೇ ನೆಲೆಯೂರುತ್ತದೆ ಎಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ! ವೈ ಭರತ್ ಶೆಟ್ಟಿಯವರು ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು, ಗ್ರಾಮಾಂತರ, ಗ್ರಾಮ ಪಂಚಾಯತ್, ಕಂದಾವರ,
ಲಯನ್ಸ್ ಕ್ಲಬ್ ಗುರುಪುರ -ಕೈಕಂಬ ಹಾಗೂ ಮಾತಾಕೃಪಾ ಟ್ರಸ್ಟ್ ಕೈಕಂಬ, ಇವರು ಪೊಂಪೈ ಅಂಗನವಾಡಿ ಕೇಂದ್ರ ಕಂದಾವರ , ನ್ಯೂ ಕಂದಾವರ, ಅಂಗನವಾಡಿ ಕೇಂದ್ರ, ಮೂಡುಕರೆ ಅಂಗನವಾಡಿ ಕೇಂದ್ರ, ಕಂದಾವರ ಹಾಗೂ ಕೌಡೂರು ಅಂಗನವಾಡಿ ಕೇಂದ್ರಗಳು ಸಂಯೋಜಿಸಿದ ಮಕ್ಕಳ ದಿನಾಚರಣೆಯ ಅಂಗವಾಗಿ ಸಂಯೋಜಿಸಿದ ಚಿಣ್ಣರ ಚಿಲಿ ಪಿಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಅವರು ಮಾತನಾಡುತ್ತಾ, ಅಂಗನವಾಡಿ ಮಕ್ಕಳೆಂದರೆ ನಿಷ್ಕಲ್ಮಷ ಹೃದಯದ ದೇವರ ಸಮಾನರು. ನಾವು ಅವರಿಗೆ ಯಾವುದನ್ನು ಹೇಳಿ ಕೊಡುತ್ತೇವೆಯೋ ಮುಂದೆ ಆ ಚಿಂತನೆಗಳೇ ಎಲ್ಲದಕ್ಕೂ ಮೂಲಾಧಾರವಾಗುತ್ತದೆ.

ಆದ್ದರಿಂದ ಸಣ್ಣ ವಯಸ್ಸಿನ ಪೋಷಣೆ ಮತ್ತು ಉತ್ತಮ ಮಾರ್ಗದರ್ಶನ ಮಹತ್ವದ್ದು. ಈ ನಿಟ್ಟಿನಲ್ಲಿ ಅಂಗನವಾಡಿ ಶಿಕ್ಷಕರು ಅಭಿನಂದನಾರ್ಹರು ಎಂದು ಅವರು ಹೇಳಿದರು. ಮಕ್ಕಳು ದೇವರ ಸಮಾನ, ಚಿಕ್ಕಂದಿನಿಂದಲೇ ಕಲಿಕೆಯ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸಲು ಸಾಧ್ಯ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಕಂದಾವರ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಶಾಲಿನಿರವರು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರದ ಯೋಜನಾಧಿಕಾರಿಯಾದ ಶ್ರೀಮತಿ ಶೈಲಾ ಕೆ. ಕಾರಿಗಿಯವರು ಮಾತನಾಡುತ್ತಾ, ಸಮುದಾಯದ ಸಹಕಾರದಿಂದ ಅಂಗನವಾಡಿ ಕೇಂದ್ರಗಳ ಗುಣಮಟ್ಟ ಉನ್ನತೀಕರಣಗೊಳ್ಳುತ್ತಿದ್ದು, ಕನ್ನಡದ ಜೊತೆಗೆ ಕೇಂದ್ರಗಳಲ್ಲಿ ಎಲ್. ಕೆ. ಜಿ ಮತ್ತು ಯು.ಕೆ.ಜಿಯೂ ಪ್ರಾರಂಭಗೊಳ್ಳುತ್ತಿದೆ. ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಶಿಕ್ಷಕಿಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಶಿಶು ಅಭಿವೃದ್ಧಿ ಯೋಜನೆಯ ಬಜಪೆ 2 ವಲಯದ ಮೇಲ್ವೀಚಾರಕಿ ಶ್ರೀಮತಿ ಕಲ್ಪನಾರವರು ಮಾತನಾಡುತ್ತಾ, ಇಲಾಖೆಯ ಜೊತೆಗೆ ಸಮುದಾಯ ಕೈಜೋಡಿಸಿದರೆ ಸರಕಾರದ ಯಾವುದೇ ಯೋಜನೆ ಸಫಲತೆ ಕಾಣುತ್ತದೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ! ಶಂಕರ್ ನಾಗ್ ರವರು ಮಾತನಾಡುತ್ತಾ, ಮಕ್ಕಳ ಉಜ್ವಲ ಭವಿಷ್ಯಕ್ಕೆ ಆರೋಗ್ಯ ಅತ್ಯಗತ್ಯ ಎಂದರು. ವೇದಿಕೆಯಲ್ಲಿ ಕಂದಾವರ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸೌಮ್ಯ ಡಿ, ಶ್ರೀಮತಿ ವಿಜಯಾ ಗೊಪಾಲ್ ಸುವರ್ಣ, ಗುರುಪುರ ಕೈಕಂಬದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ! ಜೇಸನ್ ಪೀಟರ್ ಪ್ಯಾರೀಸ್ ರವರು ಮಾತನಾಡಿದರು. ವೇದಿಕೆಯಲ್ಲಿ ಕಂದಾವರ ಪದವು ಶ್ರೀ ಕೋಡ್ದಬ್ಬು ದೈವಸ್ಥಾನದ ಗುರಿಕಾರರಾದ ವೆಂಕಪ್ಪ ಕೋಟ್ಯಾನ್, ಸುರೇಂದ್ರ ಶೇಣವ ದೇವಸ, ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು. ಛದ್ಮವೇಷ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತ ಮತ್ತು ಭಾಗವಹಿಸಿದ ಎಲ್ಲಾ ಪುಠಾಣಿಗಳಿಗೆ ಹಾಗೂ ಅವರ ಪೋಷಕರಿಗೆ ನಡೆದ ಆಟೋಟ ಸ್ಪರ್ದೆ ಮತ್ತು ಕ್ವಿಝ್ ಗಳಲ್ಲಿ ವಿಜೇತರಾದವರಿಗೂ ಬಹುಮಾನ ವಿತರಿಸಲಾಯಿತು.

ತೀರ್ಪುಗಾರರಾಗಿ ಸಂದೀಪ್ ಉಡುಪಿ, ಶ್ರೀಮತಿ ಪೂರ್ಣಿಮಾ ವಿನಯ್ ಮತ್ತು ಶ್ರೀಮತಿ ಚಿತ್ರಾ ಸಿ.ಎಚ್.ಒ.ಭಾಗವಹಿಸಿದ್ದರು. ಶ್ರೀಮತಿ ಉಷಾ ಮತ್ತು ನಿಶಾ ಪ್ರಾರ್ಥಿಸಿದರು. ಶ್ರೀಮತಿ ರೇಣುಕಾ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀಮತಿ ಶುಭಾ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಶೆಟ್ಟಿ ಕಂದಾವರ ಮತ್ತು ಭರತ್ ಎಸ್.ಕರ್ಕೇರರವರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here