ವಿಸ್ಮಯ ಮೂಡಿಸಿದ ಪ್ರಕೃತಿಯ ವಿಚಿತ್ರ ಸೃಷ್ಟಿ :8 ಕಾಲು, 3 ಕಿವಿಯೊಂದಿಗೆ ಜನಿಸಿದ ಆಡಿನ ಮರಿ

0
1


ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ಗ್ರಾಮದ ಸಮೀಪವಿರುವ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ವಿಸ್ಮಯಕಾರಿ ಘಟನೆಯೊಂದು ಸಂಭವಿಸಿದ್ದು, ಅಸಾಮಾನ್ಯ ದೈಹಿಕ ಲಕ್ಷಣಗಳನ್ನು ಹೊಂದಿರುವ ವಿಚಿತ್ರ ಆಡಿನ ಮರಿಯೊಂದು ಬುಧವಾರ ಜನಿಸಿದೆ. ಈ ಅಪರೂಪದ ಜನನವನ್ನು ಕಂಡು ಗ್ರಾಮಸ್ಥರು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಉದ್ರಿ ವಡ್ಡಿಗೆರೆ ಗ್ರಾಮದ ಕಾಳಿಂಗಪ್ಪ ಭಾವಿಕಟ್ಟೇರ್ ಹಾಗೂ ಪುಟ್ಟಮ್ಮ ದಂಪತಿ ಕೃಷಿಯ ಜೊತೆಗೆ ಕುರಿ ಮತ್ತು ಆಡು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ ಅವರ ಮನೆಯ ಆಡೊಂದು ಜನ್ಮ ನೀಡಿದ ಮರಿಯು 8 ಕಾಲುಗಳು, 3 ಕಿವಿಗಳು, 2 ಬಾಲಗಳು ಹಾಗೂ 2 ನಾಲಿಗೆಗಳನ್ನು ಹೊಂದಿತ್ತು. ಆಡು ಈಯುವ ಸಮಯದಲ್ಲಿ ಅವಳಿ ಮರಿಗಳು ಹುಟ್ಟಬಹುದು ಎಂದು ಭಾವಿಸಲಾಗಿತ್ತು. ಆದರೆ ಹುಟ್ಟಿದ ಮರಿಯ ದೈಹಿಕ ವಿನ್ಯಾಸ ಕಂಡು ಮನೆಯವರು ಹಾಗೂ ಗ್ರಾಮಸ್ಥರು ದಿಗ್ಭ್ರಮೆಗೊಂಡರು.
ಸಾಮಾನ್ಯವಾಗಿ ಇಂತಹ ತೀವ್ರ ದೈಹಿಕ ವೈಪರೀತ್ಯಗಳೊಂದಿಗೆ ಹುಟ್ಟುವ ಮರಿಗಳು ಹುಟ್ಟಿದ ತಕ್ಷಣವೇ ಪ್ರಾಣ ಕಳೆದುಕೊಳ್ಳುತ್ತವೆ. ಆದರೆ ಈ ಆಡಿನ ಮರಿಯು ಮಧ್ಯಾಹ್ನ ಜನಿಸಿ ಸಂಜೆಯವರೆಗೂ ಜೀವಂತವಾಗಿದ್ದು ವಿಸ್ಮಯ ಮೂಡಿಸಿತ್ತು. ಈ ವಿಚಿತ್ರ ಆಡಿನ ಮರಿಯನ್ನು ಕಣ್ಣುಂಬಿಕೊಳ್ಳಲು ಉದ್ರಿ ವಡ್ಡಿಗೆರೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಕಾಳಿಂಗಪ್ಪ ಅವರ ಮನೆಗೆ ಧಾವಿಸಿ ಬಂದಿದ್ದರು.