ಕೊಪ್ಪದಲ್ಲಿ ಸಿನಿಮಾ ಶೈಲಿಯ ಪ್ಲಾನ್‌ : ಬೆಡ್ ಮೇಲೆ ಗೊಂಬೆಯಿಟ್ಟು ನಾಪತ್ತೆಯಾದ ಯುವತಿ..!

0
57

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಕುಂಚೂರು ಗ್ರಾಮದಲ್ಲಿ ಯುವತಿಯೊಬ್ಬಳು ಹಾಸಿಗೆಯ ಮೇಲೆ ಗೊಂಬೆಯಿಟ್ಟು, ತಾನು ಮಲಗಿರುವಂತೆ ಬಿಂಬಿಸಿ ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ಇಡೀ ಪ್ರದೇಶದಲ್ಲಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ನಾಪತ್ತೆಯಾದ ಯುವತಿಯನ್ನು ಮೆಸ್ಕಾಂ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ಜಗದೀಶ್ ಅವರ ಪುತ್ರಿ ಜಲನ್ಯ (18) ಎಂದು ಗುರುತಿಸಲಾಗಿದೆ. ದ್ವಿತೀಯ ಪಿಯುಸಿ ಶಿಕ್ಷಣ ಮುಗಿಸಿ ಮನೆಯಲ್ಲಿದ್ದ ಜಲನ್ಯ ಕಳೆದ ಎರಡು ತಿಂಗಳಿಂದ ಕೊಪ್ಪ ಪಟ್ಟಣದ ತರಬೇತಿ ಕೇಂದ್ರವೊಂದಕ್ಕೆ ಕಂಪ್ಯೂಟರ್ ಕಲಿಯಲು ತೆರಳುತ್ತಿದ್ದಳು ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಜಲನ್ಯ ಮಧ್ಯರಾತ್ರಿ ತನ್ನ ಕೋಣೆಯ ಹಾಸಿಗೆಯ ಮೇಲೆ ಮನುಷ್ಯನ ಆಕೃತಿಯಂತೆ ಕಾಣುವ ದೊಡ್ಡ ಗೊಂಬೆಯೊಂದನ್ನು ಮಲಗಿಸಿ ಅದರ ಮೇಲೆ ಹೊದಿಕೆ ಹೊದಿಸಿದ್ದಾಳೆ. ಇದರಿಂದ ಆಕೆ ಕೋಣೆಯಲ್ಲಿ ನಿದ್ರಿಸುತ್ತಿದ್ದಾಳೆ ಎಂದು ಮನೆಯವರು ಭಾವಿಸಿದ್ದರು. ಆದರೆ ಬೆಳಗ್ಗೆ ಎದ್ದು ನೋಡಿದಾಗ ಯುವತಿ ಮನೆಯಲ್ಲಿ ಇಲ್ಲದಿರುವುದು ಗೊತ್ತಾಗಿ ಕುಟುಂಬದವರು ಬೆಚ್ಚಿಬಿದ್ದಿದ್ದಾರೆ.

ವಿಶೇಷವೆಂದರೆ, ನಾಪತ್ತೆಯಾಗುವ ಒಂದು ದಿನದ ಮುನ್ನವೇ ಜಲನ್ಯ ತನ್ನ ತಂದೆಯೊಂದಿಗೆ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಳು. ಮರುದಿನವೇ ಪೂರ್ವಯೋಜಿತ ರೀತಿಯಲ್ಲಿ ಮನೆಯಿಂದ ತೆರಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪೊಲೀಸ್ ತನಿಖೆ ವೇಳೆ ಯುವತಿ ಮನೆಯವರಿಗೆ ತಿಳಿಯದಂತೆ ರಹಸ್ಯವಾಗಿ ಮತ್ತೊಂದು ಮೊಬೈಲ್ ಫೋನ್ ಬಳಸುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಆಕೆ ಯಾರೊಂದಿಗಾದರೂ ನಿರಂತರ ಸಂಪರ್ಕದಲ್ಲಿದ್ದ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ತಂದೆ ಜಗದೀಶ್ ಹರಿಹರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೊಬೈಲ್ ಕರೆ ವಿವರಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಯುವತಿಯ ಪತ್ತೆ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here