ಸಿನಿಮೀಯ ರೀತಿಯಲ್ಲಿ ಅಪಹರಣ : 1.15 ಕೋಟಿ ರೂ. ದೋಚಿದ ಖದೀಮರು!

0
24

ಮಂಗಳೂರು : ದಾವಣಗೆರೆಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಅವರ ಬಳಿಯಿದ್ದ 1.15 ಕೋಟಿ ರೂ. ನಗದು ಹಣವಿದ್ದ ಎರಡು ಬ್ಯಾಗ್‌ಗಳು ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಲ್ವರು ಅಪರಿಚಿತರು ಕಪ್ಪು ಬಣ್ಣದ ಕಾರಿನಲ್ಲಿ ಬಂದು ವ್ಯಕ್ತಿಯನ್ನು ಬಲವಂತವಾಗಿ ಅಪಹರಿಸಿ, ಸುಮಾರು ಎರಡು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿ ಹಣ ದೋಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸತ್ಯನಾರಾಯಣ ಎಂದು ಗುರುತಿಸಲಾಗಿದೆ. ಅವರು ಉರ್ವ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬವರ ಬಳಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 23ರಂದು ನಾಗರಾಜ್ ಅವರು ಸತ್ಯನಾರಾಯಣ ಅವರಿಗೆ 1.15 ಕೋಟಿ ರೂ. ನಗದು ಹಣವಿದ್ದ ಎರಡು ಬ್ಯಾಗ್‌ಗಳನ್ನು ನೀಡಿ, ಮಂಗಳೂರಿಗೆ ತೆರಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್‌ನಲ್ಲಿ ತಂಗುವಂತೆ ಸೂಚಿಸಿದ್ದರು. ತಾವು ಕೂಡ ಅಲ್ಲಿಗೆ ಬರುವುದಾಗಿ ತಿಳಿಸಿದ್ದರು.

ಅದರಂತೆ ಅಕ್ಟೋಬರ್ 27ರಂದು ರಾತ್ರಿ 10 ಗಂಟೆಗೆ ದಾವಣಗೆರೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಆರಂಭಿಸಿದ ಸತ್ಯನಾರಾಯಣ, ಅಕ್ಟೋಬರ್ 28ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರು ತಲುಪಿದ್ದರು. ಬಳಿಕ ಲಾಲ್‌ಬಾಗ್ ಬಳಿ ಬಸ್‌ನಿಂದ ಇಳಿದು, ತಿಂಡಿ ತಿನ್ನಲು ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಫ್ಲರ್‌ನಿಂದ ಮುಖ ಮುಚ್ಚಿಕೊಂಡಿದ್ದ ನಾಲ್ವರು ಅಪರಿಚಿತರು ಕಪ್ಪು ಬಣ್ಣದ ಕಾರಿನಲ್ಲಿ ಆಗಮಿಸಿದ್ದಾರೆ.

ಬಳಿಕ ಸತ್ಯನಾರಾಯಣ ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿಯಿದ್ದ 1.15 ಕೋಟಿ ರೂ. ಹಣವಿದ್ದ ಎರಡು ಬ್ಯಾಗ್‌ಗಳು ಹಾಗೂ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ ಎನ್ನಲಾಗಿದೆ.

ನಂತರ ಬೆಳಗ್ಗೆ ಸುಮಾರು 8 ಗಂಟೆಗೆ ಕಾವೂರು ಬಸ್ ನಿಲ್ದಾಣದ ಸಮೀಪದ ಗುಡ್ಡ ಪ್ರದೇಶದಲ್ಲಿ ಅವರನ್ನು ಕಾರಿನಿಂದ ಕೆಳಗಿಳಿಸಿ, ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ, ಕೊಂದು ಹಾಕುವುದಾಗಿ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸತ್ಯನಾರಾಯಣ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 1.15 ಕೋಟಿ ರೂ. ಹಣದ ದರೋಡೆ ಪ್ರಕರಣವು ಮಂಗಳೂರು ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.