ಅಪಘಾತಕ್ಕೆ ಕಾರಣವಾಗಬಹುದಾಗಿದ್ದ ಹೊಂಡ, ಪೊದೆ ತೆರವು : ಸತೀಶ್ ಪೂಜಾರಿ ಅಮುಂಜಿ ಉಪ್ಪೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

0
16

ಉಪ್ಪೂರು: ಮಣಿಪಾಲ–ಕೊಳಲಗಿರಿ ಸಂಪರ್ಕಿಸುವ ಪ್ರಮುಖ ರಸ್ತೆಯ ಶೀಮ್ರ ಸೇತುವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ಇದ್ದ ದೊಡ್ಡ ಹೊಂಡಗಳು ಹಾಗೂ ರಸ್ತೆಯ ಎರಡೂ ಬದಿಯಲ್ಲಿದ್ದ ಪೊದೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿದ ಉಪ್ಪೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಹಾಗೂ 1ನೇ ವಾರ್ಡಿನ ಮಾಜಿ ಸದಸ್ಯ ಸತೀಶ್ ಪೂಜಾರಿ ಅಮುಂಜೆ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸೇತುವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ರಸ್ತೆ ಹೊಂಡಗಳು ಹಾಗೂ ಪೊದೆಗಳ ರಾಶಿಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಅಪಘಾತದ ಅಪಾಯವೂ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ಸಮಸ್ಯೆಯ ಗಂಭೀರತೆಯನ್ನು ಉಪ್ಪೂರು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದು, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಸಮಸ್ಯೆಯನ್ನು ಮನಗಂಡ ಮಾಜಿ ಉಪಾಧ್ಯಕ್ಷ ಸತೀಶ್ ಪೂಜಾರಿ ಅಮುಂಜೆ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ ಹಾಗೂ ಪಂಚಾಯಿತಿ ಸಿಬ್ಬಂದಿಯ ಸಹಕಾರದೊಂದಿಗೆ ರಸ್ತೆ ಹೊಂಡಗಳನ್ನು ಮುಚ್ಚಿಸಿ, ಎರಡೂ ಬದಿಯ ಪೊದೆಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದರು. ಇದರಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ರಸ್ತೆಯಲ್ಲಿ ವಾಹನ ಸವಾರರಿಗೆ ಹೆಚ್ಚಿನ ಸುರಕ್ಷತೆ ಹಾಗೂ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಡಾಂಬರೀಕರಣಕ್ಕೆ ಸಾರ್ವಜನಿಕರ ಆಗ್ರಹ

ಕೊಳಲಗಿರಿ–ಮಣಿಪಾಲ ಸಂಪರ್ಕಿಸುವ ಈ ರಸ್ತೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಹಾಗೂ ಕೆಎಂಸಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯ ಅಗಲೀಕರಣ ಕಾರ್ಯವನ್ನು ಶಾಸಕ ಯಶ್‌ಪಾಲ್ ಸುವರ್ಣ ಅವರ ವಿಶೇಷ ಮುತುವರ್ಜಿಯಲ್ಲಿ ಕೈಗೊಂಡು ಜಲ್ಲಿಕಲ್ಲು ಹಾಕಲಾಗಿದ್ದರೂ, ಇನ್ನೂ ಡಾಂಬರೀಕರಣ ಪೂರ್ಣಗೊಂಡಿಲ್ಲ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯ ಸಂಪೂರ್ಣ ಅಭಿವೃದ್ಧಿ ಹಾಗೂ ಶೀಘ್ರ ಡಾಂಬರೀಕರಣಕ್ಕಾಗಿ ಸತೀಶ್ ಪೂಜಾರಿ ಅಮುಂಜೆ ಅವರು ಶಾಸಕರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದು, ಸಮಸ್ಯೆಗೆ ಶಾಸಕರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಲಾಗಿದೆ. ಈ ರಸ್ತೆಯ ಸಮಸ್ಯೆಯನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ಹಲವು ಬಾರಿ ತರಲಾಗಿದೆ.

ಜನಸಮಸ್ಯೆಗಳಿಗೆ ತ್ವರಿತ ಸ್ಪಂದನೆ

ಉಪ್ಪೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾಗಿ ಹಾಗೂ 1ನೇ ವಾರ್ಡಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಸತೀಶ್ ಪೂಜಾರಿ ಅಮುಂಜೆ ಅವರು ವಾರ್ಡಿನ ವಿವಿಧ ಮೂಲಭೂತ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಸಾರ್ವಜನಿಕರು ದೂರವಾಣಿ ಮೂಲಕ ಸಮಸ್ಯೆ ತಿಳಿಸಿದಾಗ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಉಪ್ಪೂರು 1ನೇ ವಾರ್ಡಿನ ಶ್ರೀ ಬೊಬ್ಬರ್ಯ ದೈವಸ್ಥಾನದ ಗುರಿಕಾರ ಗಣೇಶ್ ನಾಯ್ಕ್ ಪರಾರಿ ಸೇರಿದಂತೆ ಹಲವು ಸಾರ್ವಜನಿಕರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಹೊಂಡಗಳನ್ನು ಮುಚ್ಚಿಸಿ ಪೊದೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕೆಎಂಸಿ ಉದ್ಯೋಗಿಗಳಾದ ವಿನೇಶ್ ಪೂಜಾರಿ, ಸಂದೀಪ್ ಪೂಜಾರಿ ಮಂದಾರ್ತಿ, ಶ್ವೇತಾ ಶೆಟ್ಟಿ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ಸಾವಿರಾರು ವಾಹನ ಸವಾರರು ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೈಗೊಂಡ ಈ ಕಾರ್ಯಕ್ಕೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.