ಈ ಸೌಲಭ್ಯ ಬಿಡುಗಡೆ ಮಾಡುವ ಮೂಲಕ ಫ್ಲಿಪ್ ಕಾರ್ಟ್ ಸಮೂಹದ ಈ ಸಂಸ್ಥೆಯು ವಿಮಾನ, ಹೋಟೆಲ್, ರೈಲು, ಬಸ್ ಮತ್ತು ಹಾಲಿಡೇ ಪ್ಯಾಕೇಜ್ ಗಳನ್ನು ಒಳಗೊಂಡಂತೆ ಹಲವು ಸೇವೆಗಳನ್ನು ಒಂದೇ ವೇದಿಯಲ್ಲಿ ಒದಗಿಸುತ್ತಿದೆ.
ರಾಷ್ಟ್ರೀಯ: ಫ್ಲಿಪ್ ಕಾರ್ಟ್ ಒಡೆತನದ ಭಾರತದ ಪ್ರಮುಖ ಆನ್ ಲೈನ್ ಟ್ರಾವೆಲ್ ಸಂಸ್ಥೆಯಾದ ಕ್ಲಿಯರ್ ಟ್ರಿಪ್ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಭಾರತೀಯ ರೈಲ್ವೆಯ ಅಧಿಕೃತ ಟಿಕೆಟಿಂಗ್ ವಿಭಾಗವಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಸಂಸ್ಥೆಯು, ತನ್ನ ಪ್ಲಾಟ್ ಫಾರ್ಮ್ ನಲ್ಲಿ ಇಂದಿನಿಂದ ರೈಲು ಟಿಕೆಟ್ ಬುಕಿಂಗ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.
ಈ ಹೊಸ ಸೌಲಭ್ಯ ಸೇರ್ಪಡೆಯೊಂದಿಗೆ, ಫ್ಲಿಪ್ ಕಾರ್ಟ್ ಸಮೂಹದ ಈ ಸಂಸ್ಥೆಯು ಈಗ ವಿಮಾನ, ಹೋಟೆಲ್, ಬಸ್ ಹಾಗೂ ರೈಲು ಪ್ರಯಾಣ ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ‘ಮಲ್ಟಿ- ಮಾಡೆಲ್’ ಸಂಸ್ಥೆಯಾಗಿ ಹೊರಹೊಮ್ಮಿದೆ.
ಈ ಪಾಲುದಾರಿಕೆಯು ಗ್ರಾಹಕರಿಗೆ ದೊಡ್ಡ ಮಟ್ಟದ ವಿಶ್ವಾಸಾರ್ಹತೆ ಮತ್ತು ಸರಳವಾದ ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ. ಕ್ಲಿಯರ್ ಟ್ರಿಪ್ ಬಳಕೆದಾರರಿಗೆ ಆಪ್ ಮೂಲಕವೇ ರೈಲು ಪ್ರಯಾಣ ಆಯ್ಕೆಯನ್ನು ಹುಡುಕಲು, ಬುಕ್ ಮಾಡಲು ಮತ್ತು ನಿರ್ವಹಿಸಲು ಸುಲಭವಾಗಿ ಅವಕಾಶ ಮಾಡಿಕೊಡಲಿದೆ. ಇದು ಏಕೀಕೃತ, ಮಲ್ಟಿ-ಮಾಡೆಲ್ (ಬಹು-ಮಾದರಿಯ) ಪ್ರಯಾಣ ವೇದಿಕೆಯಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಸೇವೆಯ ಮೂಲಕ, ಪ್ರಯಾಣಿಕರು ಭಾರತದಾದ್ಯಂತ ರೈಲು ಮಾರ್ಗಗಳ ಟಿಕೆಟ್ ಬುಕಿಂಗ್ ಮಾಡಬಹುದು. ಇದರಲ್ಲಿ ರೈಲ್ವೆ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ಜನರಲ್ ಮತ್ತು ತತ್ಕಾಲ್ ಕೋಟಾಗಳು ಲಭ್ಯವಿರುತ್ತವೆ. ಇದರೊಂದಿಗೆ ನೈಜ-ಸಮಯದ ಸೀಟು ಲಭ್ಯತೆ, ದರದ ಮಾಹಿತಿ, ಪಿಎನ್ಆರ್ ಸ್ಟೇಟಸ್ ಟ್ರ್ಯಾಕಿಂಗ್, ಬರ್ತ್ ಆಯ್ಕೆ ಮತ್ತು ಸುರಕ್ಷಿತ ಡಿಜಿಟಲ್ ಪಾವತಿಗಳಂತಹ ಅಗತ್ಯ ಸೇವೆಗಳನ್ನು ಒಂದೇ ಸರಳ ಇಂಟರ್ ಫೇಸ್ ನಲ್ಲಿ ಪಡೆಯಬಹುದು.
ಈ ಕುರಿತು ಕ್ಲಿಯರ್ ಟ್ರಿಪ್ ನ ಚೀಫ್ ಗ್ರೋತ್ ಅಂಡ್ ಬಿಸಿನೆಸ್ ಆಫೀಸರ್ ಮಂಜರಿ ಸಿಂಘಾಲ್ ಮಾತನಾಡಿ, “ರೈಲು ಪ್ರಯಾಣವು ಭಾರತದ ಸಾರಿಗೆ ವ್ಯವಸ್ಥೆಯ ನಿರ್ಣಾಯಕ ಭಾಗವಾಗಿದೆ. ನಾವು ಏಕೀಕೃತ, ಮಲ್ಟಿ-ಮಾಡೆಲ್ ಟ್ರಾವೆಲ್ ಪ್ಲಾಟ್ ಫಾರ್ಮ್ ಆಗುವ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಈ ಹೊಸ ಸೌಲಭ್ಯ ಪರಿಚಯವು ಒಂದು ಪ್ರಮುಖ ಹೆಜ್ಜೆಯಾಗಿದೆ. ಐಆರ್‌ಸಿಟಿಸಿ ಜೊತೆಗಿನ ನಮ್ಮ ಪಾಲುದಾರಿಕೆ ಮೂಲಕ ಬುಕಿಂಗ್ ಅನುಭವವನ್ನು ಸರಳಗೊಳಿಸುವ ಮತ್ತು ಲಕ್ಷಾಂತರ ಪ್ರಯಾಣಿಕರಿಗೆ ಇದನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವತ್ತ ನಾವು ಗಮನ ಹರಿಸಿದ್ದೇವೆ,” ಎಂದು ತಿಳಿಸಿದರು.
ಕ್ಲಿಯರ್ ಟ್ರಿಪ್ ನ ಚೀಫ್ ಬಿಸಿನೆಸ್ ಆಫೀಸರ್ (ಏರ್) ಗೌರವ್ ಪಟ್ವಾರಿ ಮಾತನಾಡಿ,”ಪ್ರತಿ ವರ್ಷ 80 ಕೋಟಿಗೂ ಹೆಚ್ಚು ರಿಸರ್ವ್ ಮಾಡಿದ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದು ಕೇವಲ ಸಂಖ್ಯೆಗೆ ಸೀಮಿತವಾದ ವಿಚಾರವಲ್ಲ; ಇದು ಗ್ರಾಹಕರಿಗೆ ವಿಭಿನ್ನವಾದ ಅನುಭವವನ್ನು ಒದಗಿಸುವುದಾಗಿದೆ. ಸರಳ, ಸುಲಭ ಬುಕಿಂಗ್ ಅನುಭವ, ಪ್ರಿಡಿಕ್ಟಿವ್ ಇಂಟೆಲಿಜೆನ್ಸ್ ಮತ್ತು ವೈಯಕ್ತಿಕೀಕರಣ ಸೌಲಭ್ಯವನ್ನು ಅಳವಡಿಸುವ ಮೂಲಕ, ಶೋಧನೆಯಿಂದ ಹಿಡಿದು ಬುಕಿಂಗ್ ನಂತರದ ಬೆಂಬಲದವರೆಗೆ ಪ್ರತಿಯೊಂದು ಹಂತವೂ ವೇಗವಾಗಿರುವಂತೆ, ವಿಶ್ವಾಸಾರ್ಹವಾಗಿರುವಂತೆ ಮತ್ತು ಒತ್ತಡರಹಿತವಾಗಿರುವಂತೆ ನಾವು ನೋಡಿಕೊಳ್ಳಲಿದ್ದೇವೆ” ಎಂದರು.
ಭಾರತದ ರೈಲ್ವೆ ಜಾಲವು ವಿಶ್ವದ ಅತ್ಯಂತ ಸಂಕೀರ್ಣ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಪ್ರತಿದಿನ 2.3 ಕೋಟಿ ಮತ್ತು ವಾರ್ಷಿಕವಾಗಿ 700 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ಕ್ಲಿಯರ್ ಟ್ರಿಪ್ ತನ್ನ ಸೇವೆಗಳಲ್ಲಿ ರೈಲು ಬುಕಿಂಗ್ ಅನ್ನು ಸಂಯೋಜಿಸುವ ಮೂಲಕ ಈ ಬೃಹತ್ ಬೇಡಿಕೆಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಕಂಪನಿಯು ಶೀಘ್ರದಲ್ಲೇ ಈ ಸೇವೆಯನ್ನು ತನ್ನ ವೆಬ್ ಪ್ಲಾಟ್ ಫಾರ್ಮ್ ಗೂ ವಿಸ್ತರಿಸಲು ಯೋಜಿಸಿದ್ದು, ಬಳಕೆದಾರರಿಗೆ ಎಲ್ಲಾ ವೇದಿಕೆಗಳಲ್ಲಿ ಸುಗಮ ಅನುಭವವನ್ನು ಒದಗಿಸಲಿದೆ.

