ಹವಾಮಾನ ಶಿಕ್ಷಣ: ಯುವ ಭಾರತೀಯರಿಗೆ ಉದ್ಯೋಗದ ಹೊಸ ದಾರಿ

0
11

ಕೇಂಬ್ರಿಡ್ಜ್ ಅಧ್ಯಯನದಲ್ಲಿ ಮಹತ್ವದ ಮಾಹಿತಿ; ಹವಾಮಾನ ವಿಷಯದ ಆಸಕ್ತಿ ಶೇ.40ರಿಂದ 61.2ಕ್ಕೆ ಏರಿಕೆ

ನವದೆಹಲಿ : ಹವಾಮಾನ ಬದಲಾವಣೆಯು ಆರ್ಥಿಕತೆ, ಉದ್ಯಮ, ಸಾರ್ವಜನಿಕ ನೀತಿ ಹಾಗೂ ಭವಿಷ್ಯದ ಉದ್ಯೋಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ, ಹವಾಮಾನ ಶಿಕ್ಷಣವು ಯುವಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಭವಿಷ್ಯದ ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆ ಹೊಸ ಆಸಕ್ತಿಯನ್ನು ಬೆಳೆಸುತ್ತಿದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ಸ್ವತಂತ್ರ ಅಧ್ಯಯನ ತಿಳಿಸಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಪ್ರೊಫೆಸರ್ ನಿಧಿ ಸಿಂಘಾಲ್ ಮತ್ತು ಡಾ. ಕ್ಯಾಮಿಲ್ಲಾ ಹದಿ ಚೌಧರಿ ನಡೆಸಿದ ಕೇಂಬ್ರಿಡ್ಜ್ ಕ್ಲೈಮೇಟ್ ಕ್ವೆಸ್ಟ್ ಕಾರ್ಯಕ್ರಮದ ಸ್ವತಂತ್ರ ಮೌಲ್ಯಮಾಪನದಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದ 18 ಶಾಲೆಗಳ ಸುಮಾರು 1,200 ವಿದ್ಯಾರ್ಥಿಗಳನ್ನು ಒಳಗೊಂಡ ಸಮೀಕ್ಷೆ ನಡೆಸಲಾಗಿದೆ.

ಅಧ್ಯಯನದ ಪ್ರಕಾರ, ಕಾರ್ಯಕ್ರಮಕ್ಕೂ ಮುನ್ನ ಹವಾಮಾನ ಬದಲಾವಣೆಯ ವಿಷಯದಲ್ಲಿ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳ ಪ್ರಮಾಣ ಸುಮಾರು ಶೇ.40ರಷ್ಟಿದ್ದು, ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಅದು ಶೇ.61.2ಕ್ಕೆ ಏರಿಕೆಯಾಗಿದೆ. ಆರಂಭದಲ್ಲಿ ಕಡಿಮೆ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳಲ್ಲಿಯೂ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.

ಸುಮಾರು ಶೇ.59ರಷ್ಟು ವಿದ್ಯಾರ್ಥಿಗಳು ಹವಾಮಾನಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಪ್ರೇರಣೆ ಹೊಂದಿರುವುದಾಗಿ ತಿಳಿಸಿದ್ದಾರೆ. ವಿದ್ಯುತ್ ಬಳಕೆ ಕಡಿಮೆ ಮಾಡುವುದು, ಏಕಬಳಕೆಯ ಪ್ಲಾಸ್ಟಿಕ್ ತ್ಯಜಿಸುವುದು, ಗಿಡ ನೆಡುವುದು, ಮರುಬಳಕೆ ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುವಂತಹ ಕ್ರಮಗಳನ್ನು ವಿದ್ಯಾರ್ಥಿಗಳು ಗುರುತಿಸಿದ್ದಾರೆ.

ಹವಾಮಾನ ಬದಲಾವಣೆಯನ್ನು ಕೇವಲ ಪರಿಸರ ಸಮಸ್ಯೆಯಾಗಿ ನೋಡದೆ ಸಾರ್ವಜನಿಕ ಆರೋಗ್ಯ, ಅರ್ಥಶಾಸ್ತ್ರ, ಸಾಮಾಜಿಕ ನ್ಯಾಯ, ಸಮಾನತೆ, ಮಾನವ ಹಕ್ಕುಗಳು, ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಸಂಪರ್ಕಿಸಿ ಅರ್ಥಮಾಡಿಕೊಳ್ಳುತ್ತಿರುವುದನ್ನೂ ಅಧ್ಯಯನ ಗುರುತಿಸಿದೆ.

ವಿದ್ಯಾರ್ಥಿಗಳು ಭಯ ಹುಟ್ಟಿಸುವ ನಿರೂಪಣೆಗಳಿಗಿಂತ ವಿಶ್ವಾಸಾರ್ಹ ಮಾಹಿತಿ, ಪ್ರಾಯೋಗಿಕ ಜ್ಞಾನ ಹಾಗೂ ಹವಾಮಾನ ಸಮಸ್ಯೆಗಳ ಪರಿಹಾರದಲ್ಲಿ ತಾವು ಕೊಡುಗೆ ನೀಡಲು ಅವಕಾಶಗಳನ್ನು ಬಯಸುತ್ತಿದ್ದಾರೆ. ಹವಾಮಾನ ಶಿಕ್ಷಣವು ಆತಂಕಕ್ಕಿಂತ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವೂ ಅಧ್ಯಯನದಲ್ಲಿ ವ್ಯಕ್ತವಾಗಿದೆ.

ಮುಖ್ಯವಾಗಿ, ಹಲವು ವಿದ್ಯಾರ್ಥಿಗಳು ಸುಸ್ಥಿರತೆ, ಪರಿಸರ ನೀತಿ, ಹವಾಮಾನ ತಂತ್ರಜ್ಞಾನ, ಎಂಜಿನಿಯರಿಂಗ್, ಸುಸ್ಥಿರ ಉದ್ಯಮ ಹಾಗೂ ಆವಿಷ್ಕಾರದ ಕ್ಷೇತ್ರಗಳಲ್ಲಿ ಭವಿಷ್ಯದ ಅವಕಾಶಗಳ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹವಾಮಾನ ಜಾಗೃತಿ ಮತ್ತು ವೃತ್ತಿಜೀವನದ ಗುರಿಗಳನ್ನು ಪರಸ್ಪರ ಸಂಬಂಧಿತವಾಗಿ ನೋಡುತ್ತಿರುವ ಪ್ರವೃತ್ತಿ ಕಂಡುಬಂದಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ನಿಧಿ ಸಿಂಘಾಲ್ ಅವರ ಪ್ರಕಾರ, ವಿದ್ಯಾರ್ಥಿಗಳು ಹವಾಮಾನ ಬದಲಾವಣೆಯನ್ನು ಪರಿಸರದ ದೃಷ್ಟಿಕೋನಕ್ಕೆ ಮಾತ್ರ ಸೀಮಿತಗೊಳಿಸದೆ ಸಾರ್ವಜನಿಕ ಆರೋಗ್ಯ, ಸಾಮಾಜಿಕ ನ್ಯಾಯ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಭವಿಷ್ಯದ ವೃತ್ತಿಜೀವನದೊಂದಿಗೆ ಸಂಯೋಜಿಸುತ್ತಿದ್ದಾರೆ.

ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಅಂಡ್ ಅಸೆಸ್‌ಮೆಂಟ್‌ನ ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ರಾಜಮಣಿ ಅವರ ಪ್ರಕಾರ, ಹವಾಮಾನ ಶಿಕ್ಷಣವು ಯುವಜನರನ್ನು ಭವಿಷ್ಯದ ಜಗತ್ತಿಗೆ ಸಜ್ಜುಗೊಳಿಸುವ ಕಲಿಕೆಯ ಭಾಗವಾಗುತ್ತಿದೆ.

ಅಧ್ಯಯನದಲ್ಲಿ ಗುರುತಿಸಲಾದ ಪ್ರಮುಖ ಆದ್ಯತೆಗಳು

  • ವಿಶ್ವಾಸಾರ್ಹ ಹಾಗೂ ಪುರಾವೆ ಆಧರಿತ ಹವಾಮಾನ ಮಾಹಿತಿಯ ಲಭ್ಯತೆ.
  • ಯೋಜನೆಗಳು, ಕ್ಷೇತ್ರ ಭೇಟಿಗಳು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ಪ್ರಾಯೋಗಿಕ ಕಲಿಕೆ.
  • ಹವಾಮಾನ ಶಿಕ್ಷಣವನ್ನು ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸುವ ಮಾರ್ಗಗಳು.
  • ಸುಸ್ಥಿರತೆ ಕಲಿಕೆಯಲ್ಲಿ ಸ್ಥಳೀಯ ಹಾಗೂ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಹೆಚ್ಚಿನ ಸಂಯೋಜನೆ.

ಒಟ್ಟಾರೆ, ಹವಾಮಾನ ಶಿಕ್ಷಣವು ಯುವಜನರಲ್ಲಿ ಪರಿಸರ ಜಾಗೃತಿಯ ಜೊತೆಗೆ ಭವಿಷ್ಯದ ಕೌಶಲ್ಯ, ಉನ್ನತ ಶಿಕ್ಷಣ, ಉದ್ಯೋಗ ಮತ್ತು ಆವಿಷ್ಕಾರದ ಕುರಿತು ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತಿದೆ ಎಂಬುದನ್ನು ಅಧ್ಯಯನದ ಫಲಿತಾಂಶಗಳು ಸೂಚಿಸಿವೆ.