ಎಸ್. ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಯಶ್ಪಾಲ್
ಉಡುಪಿ : ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ. ತುಳು ಭಾಷೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದರೆ ಭಾಷೆಯ ವೈವಿಧ್ಯತೆ ಮತ್ತು ವಿಶಾಲತೆ ಸರ್ಕಾರದ ಗಮನಸೆಳೆಯಲಿದೆ. ಹೀಗಾಗಿ ಒಗ್ಗಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತುಳು ಭಾಷೆ ಪಸರಿಸುವ ಕೆಲಸ ಮಾಡಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಐವೈಸಿ ಸಭಾಂಗಣದಲ್ಲಿ ತುಳು ಭಾಷಾ ಮಾನ್ಯತೆ ಸಂಭ್ರಮ ಹಾಗೂ ವಿಶ್ವಪ್ರಭಾ ಪ್ರಯೋಜಿತ ಎಸ್. ಯು. ಪಣಿಯಾಡಿ ನೆನಪಿನ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಬರೋಡಾ ಶಶಿಧರ ಶೆಟ್ಟಿ ಮಾತನಾಡಿ, ಮುಂದಿನ ಪೀಳಿಗೆಗೆ ತುಳು ಭಾಷೆ, ಸಂಸತಿ ತಿಳಿಸುವ ಕೆಲಸ ನಡೆಯಬೇಕು. ಲಿಪಿಯನ್ನು ಕಲಿಸಬೇಕು. ಇದರಿಂದ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ 2025ನೇ ಸಾಲಿನ ಪಣಿಯಾಡಿ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾದ ದಧೂಟಿ ಬನ ಕಾದಂಬರಿ ಲೇಖಕಿ ಪುತ್ತೂರಿನ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರಿಗೆ 10 ಸಾವಿರ ನಗದು ಸಮೇತ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಾಹಿತಿ ವಾಸಂತಿ ಅಂಬಪಾಡಿ ಕೃತಿಯ ಪರಿಚಯವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ಹಾಗೂ ಉದ್ಯಮಿ ಪ್ರಸಾದ್ರಾಜ್ ಕಾಂಚನ್, ತುಳು ಸಂಘ ಬರೋಡಾದ ಗೌರವಾಧ್ಯಕ್ಷ ದಯಾನಂದ ಬೋಂಟ್ರ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಯುವ ಉದ್ಯಮಿ ಸುಭಾಷ್ ಸಾಲ್ಯಾನ್ ನೆಲ್ಲಿಕಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ. ಭಂಡಾರಿ, ಸಾಂಗ್ಲಿದಿವಾಕರ್, ರಾಜ್ಕುಮಾರ್ ಬೆಹರೆನ್, ತುಳುಕೂಟ ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ, ಡಾ. ವಿ.ಕೆ. ಯಾದವ್, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಪಣಿಯಾಡಿ ಪ್ರಶಸ್ತಿ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ, ತುಳುವೆರೆ ದಿಬ್ಬಣ ಸಂಚಾಲಕ ದಿವಾಕರ್ ಸನಿಲ್, ಶೋಭಾ ಮೊದಲಾದವರು ಉಪಸ್ಥಿತರಿದ್ದರು. ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

