ಕೆ.ಜಿ. ರಸ್ತೆ–ಪೆರಡೂರು ಮಾರ್ಗದಲ್ಲಿ ಪೊದೆಗಳ ಕಾಟ: ತೆರವುಗೊಳಿಸಲು ಆಗ್ರಹ

0
6

ಅಪಾಯಕಾರಿ ತಿರುವು, ಮರ–ಕೊಂಬೆಗಳಿಂದಲೂ ಆತಂಕ; ಮೂಲಸೌಕರ್ಯ ಕಲ್ಪಿಸಲು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯ

ಪೆರಡೂರು: ಮಳೆಗಾಲದ ಬಳಿಕ ಕೆ.ಜಿ. ರಸ್ತೆ–ಪೆರಡೂರು ಮಾರ್ಗದ ರಸ್ತೆಯ ಎರಡೂ ಬದಿಗಳಲ್ಲಿ ಪೊದೆಗಳು ದಟ್ಟವಾಗಿ ಬೆಳೆದು ರಸ್ತೆಗೆ ಚಾಚಿಕೊಂಡಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ರಸ್ತೆಯ ಬದಿಯ ಪೊದೆಗಳು ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣದಂತೆ ಮಾಡುತ್ತಿದ್ದು, ಅಪಾಯಕಾರಿ ತಿರುವುಗಳಿರುವ ಈ ಮಾರ್ಗದಲ್ಲಿ ಅಪಘಾತದ ಆತಂಕ ಹೆಚ್ಚಾಗಿದೆ.

ಪ್ರತಿವರ್ಷ ಮಳೆಗಾಲ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಬದಿಗೆ ಚಾಚಿಕೊಂಡಿರುವ ಪೊದೆಗಳನ್ನು ತೆರವುಗೊಳಿಸುತ್ತಿದ್ದರು. ಆದರೆ ಈ ಬಾರಿ ಮಳೆ ಕಡಿಮೆಯಾಗಿ ರಸ್ತೆ ಬದಿಯ ಪೊದೆಗಳು ದಟ್ಟವಾಗಿ ಬೆಳೆದಿದ್ದರೂ ಅವುಗಳನ್ನು ಸಮರ್ಪಕವಾಗಿ ತೆರವುಗೊಳಿಸದಿರುವುದು ವಾಹನ ಸವಾರರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪೆರಡೂರು–ಹೆಬ್ರಿ ಮಾರ್ಗವಾಗಿ ಮಣಿಪಾಲ ಸೇರಿದಂತೆ ವಿವಿಧ ಭಾಗಗಳಿಗೆ ಸಂಚರಿಸುವ ವಾಹನಗಳು ಈ ರಸ್ತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿವೆ. ದಿನದ ಬಹುತೇಕ ಸಮಯ ವಾಹನ ಸಂಚಾರವಿರುವ ಪ್ರಮುಖ ರಸ್ತೆಯಾಗಿರುವುದರಿಂದ ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸುವುದು ತುರ್ತು ಅಗತ್ಯವಾಗಿದೆ.

ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿ ಮರಗಳು ಹಾಗೂ ಒಣಗಿದ ಕೊಂಬೆಗಳು ಇರುವುದರಿಂದ ಮಳೆ, ಗಾಳಿ ಅಥವಾ ಪ್ರತಿಕೂಲ ಹವಾಮಾನ ಸಂದರ್ಭದಲ್ಲಿ ಅವು ರಸ್ತೆಗೆ ಉರುಳಿ ಬೀಳುವ ಅಪಾಯವೂ ಇದೆ. ರಾಜ್ಯದ ವಿವಿಧೆಡೆ ಒಣಗಿದ ಹಾಗೂ ಅಪಾಯಕಾರಿ ಮರಗಳು ಬಿದ್ದು ಅನಾಹುತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ರಸ್ತೆಯಲ್ಲಿರುವ ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ಪರಿಶೀಲಿಸಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆಯಲ್ಲಿರುವ ಅಪಾಯಕಾರಿ ತಿರುವುಗಳಲ್ಲಿಯೂ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡುವ ಫಲಕಗಳು ಹಾಗೂ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಬೇಕಾಗಿದೆ. ವಿಶೇಷವಾಗಿ ರಾತ್ರಿ ವೇಳೆ ಸಂಚಾರಕ್ಕೆ ಅನುಕೂಲವಾಗುವಂತೆ ಸೂಕ್ತ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ.

ಈ ಮಾರ್ಗದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಪ್ರತಿದಿನ ಸಂಚರಿಸುತ್ತಿರುವುದರಿಂದ ಅವರ ಸುರಕ್ಷತೆಗೆ ಆದ್ಯತೆ ನೀಡಬೇಕು. ನಾಲ್ಕು ಗ್ರಾಮ ಪಂಚಾಯಿತಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ರಸ್ತೆ ಬದಿಯ ಪೊದೆಗಳ ತೆರವು, ಅಪಾಯಕಾರಿ ಮರ–ಕೊಂಬೆಗಳ ತೆರವು, ಅಪಾಯಕಾರಿ ತಿರುವುಗಳಲ್ಲಿ ಸುರಕ್ಷತಾ ಕ್ರಮಗಳು ಹಾಗೂ ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.

ಯಾವುದೇ ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಮುನ್ನೆಚ್ಚರಿಕೆಯಾಗಿ ಈಗಲೇ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.