ಲಾರಿ ಹಿಂದಕ್ಕೆ ಚಲಾಯಿಸುವ ವೇಳೆ ದಿಮ್ಮಿ ಬಿದ್ದು ಕಂಡಕ್ಟರ್ ಮೃತ್ಯು

0
35

ಬಂಟ್ವಾಳ : ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಹಿಂದಕ್ಕೆ ಚಲಾಯಿಸುವ ಸಂದರ್ಭ ಮರದ ದಿಮ್ಮಿಯೊಂದು ಜಾರಿ ಬಿದ್ದು, ಲಾರಿ ಕಂಡಕ್ಟರ್ ಮೃತಪಟ್ಟ ಘಟನೆ ಬಂಟ್ವಾಳ ಕಸಬಾ ಗ್ರಾಮದ ಮಾಣಿ ಸಮೀಪದ ಶ್ರೀ ಮಾರುತಿ ಸಾ ಮಿಲ್‌ನಲ್ಲಿ ನಡೆದಿದೆ.

ಮೃತರನ್ನು ಶಕೀಲ್ ಅಬ್ದುಲ್ ಅಜೀಬ್ (53) ಎಂದು ಗುರುತಿಸಲಾಗಿದೆ.

ಕೇರಳದ ಕಾಲಡಿ ಮರದ ಮಿಲ್ಲಿನಿಂದ ಕೆಎ 22 ಎಎ 9799 ನೋಂದಣಿಯ ಲಾರಿಯಲ್ಲಿ ಮರದ ದಿಮ್ಮಿಗಳನ್ನು ಸೆ.9ರಂದು ಮಧ್ಯಾಹ್ನ ಸುಮಾರು 2.10ಕ್ಕೆ ಮಾಣಿ ಸಮೀಪದ ಶ್ರೀ ಮಾರುತಿ ಸಾ ಮಿಲ್‌ಗೆ ತರಲಾಗಿತ್ತು. ಲಾರಿಯಲ್ಲಿ ಚಾಲಕ ಯಶ ಯರಮಾಳಕರ ಹಾಗೂ ಕಂಡಕ್ಟರ್ ಶಕೀಲ್ ಅಬ್ದುಲ್ ಅಜೀಬ್ ಇದ್ದರು.

ಊಟದ ಬಳಿಕ ಮಧ್ಯಾಹ್ನ ಸುಮಾರು 3.45ಕ್ಕೆ ಇಬ್ಬರೂ ಕೆಲಸ ಆರಂಭಿಸಿದ್ದರು. ಈ ವೇಳೆ ಚಾಲಕ ಲಾರಿಯನ್ನು ಹಿಂದಕ್ಕೆ ಚಲಾಯಿಸುವಾಗ ಹಿಂಬದಿಯನ್ನು ಗಮನಿಸದೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ, ಲಾರಿಯಲ್ಲಿದ್ದ ಮರದ ದಿಮ್ಮಿಯೊಂದು ಜಾರಿ ಹಿಂಬದಿಯಲ್ಲಿದ್ದ ಕಂಡಕ್ಟರ್ ಶಕೀಲ್ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ.

ದಿಮ್ಮಿ ಬಿದ್ದ ಪರಿಣಾಮ ಶಕೀಲ್ ಅವರು ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಬಿದ್ದಿದ್ದರು. ಕೂಡಲೇ ಅವರನ್ನು ಅಂಬ್ಯುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಲಾರಿ ಚಾಲಕ ಯಶ ಯರಮಾಳಕರ ಅವರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಿರ್ಯಾದಿದಾರ ಚಂದಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.