ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಬ್ಯಾಗ್ ಕಳವು : ಸಿಸಿಟಿವಿಯಿಂದ ಬಯಲಾಯ್ತು ಮಹಿಳೆಯ ಕೈಚಳಕ

0
27

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬಸ್ ಹಾಗೂ ರೈಲುಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ನ ಬ್ಯಾಗ್ ಕಳವು ಮಾಡಲು ಯತ್ನಿಸಿದ ಮಹಿಳೆಯೊಬ್ಬಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯಂತೆ, KA-57 F 6331 ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ವಿಪರೀತ ಜನಸಂದಣಿಯನ್ನು ದುರುಪಯೋಗಪಡಿಸಿಕೊಂಡ ತಮಿಳುನಾಡು ಮೂಲದ ಮಹಿಳೆಯೊಬ್ಬಳು ಕಂಡಕ್ಟರ್‌ನ ಬ್ಯಾಗ್ ಅನ್ನು ಕಳವು ಮಾಡಿದ್ದಾಳೆ. ಅನುಮಾನ ಬಾರದಂತೆ ಬ್ಯಾಗ್ ಹಾಗೂ ಟಿಕೆಟ್‌ಗಳನ್ನು ತಾನು ತಂದಿದ್ದ ಬ್ಯಾಗ್‌ನೊಳಗೆ ಅಡಗಿಸಿಟ್ಟಿದ್ದಾಳೆ. ಆದರೆ ಆಕೆಯ ಕೃತ್ಯ ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ.

ಮುಂದಿನ ನಿಲ್ದಾಣದಲ್ಲಿ ಬಸ್‌ನಿಂದ ಇಳಿದು ಪರಾರಿಯಾಗಲು ಮಹಿಳೆ ಯತ್ನಿಸುತ್ತಿದ್ದ ವೇಳೆ, ಕಂಡಕ್ಟರ್ ತನ್ನ ಬ್ಯಾಗ್ ಕಾಣೆಯಾಗಿರುವುದನ್ನು ಗಮನಿಸಿ ತಕ್ಷಣ ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಸ್‌ನ ಸ್ವಯಂಚಾಲಿತ ಬಾಗಿಲುಗಳನ್ನು ಮುಚ್ಚಲಾಗಿದ್ದು, ಮಹಿಳೆ ಬಸ್‌ನಲ್ಲೇ ಸಿಲುಕಿದ್ದಾಳೆ.

ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಹಿಳಾ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ಆರೋಪಿ ಮಹಿಳೆಯ ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ ಕಂಡಕ್ಟರ್‌ನ ಬ್ಯಾಗ್ ಪತ್ತೆಯಾಗಿದೆ. ಆದರೆ ಬ್ಯಾಗ್‌ನಲ್ಲಿದ್ದ ಹಣ ಕಾಣೆಯಾಗಿದ್ದು, ಅದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿರುವ ಪೊಲೀಸರು, ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ. ಬಸ್‌ನ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ.