ಕಾರ್ಕಳ–ಕಳಸ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪೂರ್ಣ: ಸಚಿವ ಸತೀಶ್ ಜಾರಕಿಹೊಳಿ

0
10

ಕಾರ್ಕಳ : ಕಾರ್ಕಳ ಎಸ್‌ಕೆ ಬಾರ್ಡರ್‌ ಆಗಿ ಕಳಸ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಲೋಕೋಪಯೋಗಿ ಇಲಾಖಾ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಅವರು ಜು. 15ರಂದು ತೀರ್ಥಹಳ್ಳಿ ಉಡುಪಿ ರಾಜ್ಯ ಹೆದ್ದಾರಿ 27ರ ಆಗುಂಬೆ ಘಾಟಿ ವೀಕ್ಷಣೆಗೆ ಆಗಮಿಸಿದ್ದ ವೇಳೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾರ್ಕಳದಿಂದ ಮಾಳ ಎಸ್.‌ಕೆ. ಬಾರ್ಡರ್‌, ಮೂಡಿಗೆರೆಯಾಗಿ ಕಳಸಕ್ಕ ಸಂಪರ್ಕಿಸುವ ರಸ್ತೆ ದುರಸ್ತಿ ಕುರಿತು ಮಾತನಾಡಿ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.

ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಕಡಿಮೆ ಅನುದಾನ
ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಅನುದಾನ ನೀಡುತ್ತಿಲ್ಲ ಎಂಬ ಶಾಸಕರ ಆರೋಪವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅನುದಾನವಿಲ್ಲದೇ ಕಾಯಿ ಒಡೆದು‌ ಗುದ್ದಲಿ ಪೂಜೆ ನಡೆದದ್ದೇ ? ಅದೆಲ್ಲಾ ರಾಜಕೀಯಕ್ಕಾಗಿ ಅವರು ಹೇಳುತ್ತಾರೆ. ನಮ್ಮ ಶಾಸಕರಿರುವ ಕಡೆಗೆ ಹೆಚ್ಚಿನ ಅನುದಾನ, ಬಿಜೆಪಿ ಶಾಸಕರಿರುವ ಕಡೆ ಕಡಿಮೆ ಅನುದಾನ ನೀಡಲಾಗಿದೆ. ನಾವು ಶಾಸಕರಿದ್ದಾಗ ನಮಗೂ ಅವರು ಅನುದಾನ ನೀಡಿರಲಿಲ್ಲ ಎಂದರು.

ಮಹಾಮಸ್ತಕಾಭಿಷೇಕಕ್ಕೆ ಅನುದಾನ
2027ರಲ್ಲಿ ನಡೆಯಲಿರುವ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಬಗ್ಗೆ ಮಾತನಾಡಿ, ಇದು ಸರಕಾರಿ ಕಾರ್ಯಕ್ರಮ. ಹೀಗಾಗಿ ಸರಕಾರ ಅನುದಾನ ಕೊಟ್ಟೆ ಕೊಡುತ್ತದೆ ಎಂದರು. ಹಿಂದಿನ ಸರಕಾರಗಳು ಈ ಮಹಾಮಸ್ತಕಾಭಿಷೇಕ ನಡೆಸಿದೆ, ನಮ್ಮ ಸರಕಾರವೂ ನಡೆಸುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷೆ, ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾರಾದರೇನೂ ನಮ್ಮವರೇ ಆಗಿದ್ದಾರೆ. ಅದು ಕೂಡ ಕರಾವಳಿ ಭಾಗದವರು ಆಗಿದ್ದಾರೆ. ಅವರಾದರೂ ಒಂದೇ, ನಾವಾದರೂ ಒಂದೇ. ಎಲ್ಲರೂ ಒಟ್ಟು ಸೇರಿ ಕಾರ್ಯನಿರ್ವಹಿಸುತ್ತೇವೆ ಎಂದರು. ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾ ಆದಷ್ಟು ಬೇಗನೇ ಆಗಬೇಕೆಂದು ನಮಗೂ ಇದೆ. ಇನ್ನೇನು ಎರಡು ಮೂರು ದಿನದಲ್ಲಿ ಆಗಬಹುದು ಎಂದು ಹೇಳಿದರು.

ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ರಕ್ಷಿತ್‌ ಶಿವರಾಂ, ಉದಯ ಶೆಟ್ಟಿ ಮುನಿಯಾಲು, ಕಾರ್ಕಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿಪಿನ್‌ ಚಂದ್ರಪಾಲ್‌ ನಕ್ರೆ, ಪುರಸಭಾ ಮಾಜಿ ಅಧ್ಯಕ್ಷರಾದ ಸುಭಿತ್‌ ಎನ್.ಆರ್.‌, ಪ್ರತಿಮಾ ರಾಣೆ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಭಾನುಭಾಸ್ಕರ್‌, ಮಾಲಿನಿ ರೈ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಇಲಾಖಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಚಿವರು ಸಭೆ ನಡೆಸಿದರು.