ಬೆಂಗಳೂರು : ಅತಿಯಾದ ಉಪ್ಪಿನ ಸೇವನೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಉಪ್ಪಿನ ಬಳಕೆ ಮತ್ತು ಸೇವನೆ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸಾರ್ವಜನಿಕರು ಮಾತ್ರವಲ್ಲದೆ ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಆಹಾರ ತಯಾರಿಕಾ ಸಂಸ್ಥೆಗಳು ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದೆ.
ಮಾರ್ಗಸೂಚಿಯಲ್ಲೇನಿದೆ?
ದಿನಕ್ಕೆ ಒಟ್ಟು 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಉಪ್ಪಿನಕಾಯಿ, ಪಾಪಡ್, ಚಿಪ್ಸ್, ಉಪ್ಪುಸಹಿತ ತಿಂಡಿಗಳು ಹಾಗೂ ಇತರ ಸಂಸ್ಕರಿತ ಆಹಾರಗಳ ಸೇವನೆಯನ್ನು ಮಿತಿಗೊಳಿಸಬೇಕು.
ಪ್ಯಾಕೆಟ್ ಆಹಾರ ಖರೀದಿಸುವಾಗ ಅದರ ಲೇಬಲ್‌ನಲ್ಲಿರುವ ಸೋಡಿಯಂ ಪ್ರಮಾಣವನ್ನು ಪರಿಶೀಲಿಸಬೇಕು.
ಅಡುಗೆ ಮಾಡುವಾಗ ಉಪ್ಪಿನ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು.
ಮಕ್ಕಳಿಗೆ ಬಾಲ್ಯದಿಂದಲೇ ಕಡಿಮೆ ಉಪ್ಪಿನ ಆಹಾರದ ಅಭ್ಯಾಸ ಬೆಳೆಸಬೇಕು.
ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರಕ್ಕೆ ಹೆಚ್ಚುವರಿ ಉಪ್ಪು ಸೇರಿಸುವುದನ್ನು ತಪ್ಪಿಸುವಂತೆ ಸೂಚಿಸಬೇಕು.
ಅಧಿಕ ರಕ್ತದೊತ್ತಡ, ಹೃದಯ ಅಥವಾ ಮೂತ್ರಪಿಂಡದ ಸಮಸ್ಯೆ ಇರುವವರು ಉಪ್ಪಿನ ಸೇವನೆ ಕಡಿಮೆ ಮಾಡುವ ಕುರಿತು ವೈದ್ಯರ ಸಲಹೆ ಪಡೆಯಬೇಕು.
ಅತಿಯಾದ ಉಪ್ಪಿನ ಸೇವನೆಯಿಂದ ಉಂಟಾಗಬಹುದಾದ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡಲು ಸಾರ್ವಜನಿಕರು ಆಹಾರ ಪದ್ಧತಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

