ನಾಡಿನಲ್ಲಿ ತುಳು ಭವನದ ಮೂಲಕ ನಿರಂತರ ಸಾಂಸ್ಕೃತಿಕ ಚಟುವಟಿಕೆ ಹೆಮ್ಮೆಯ ವಿಚಾರ: ಪ್ರದೀಪ್ ಕುಮಾರ್ ಕಲ್ಕೂರ

0
9

ಬದಿಯಡ್ಕ : ಗಡಿನಾಡು ಕಾಸರಗೋಡಿನ ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿರುವ ತುಳು ಭವನವು ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗಾಗಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ಅವರು ಬದಿಯಡ್ಕದ ತುಳು ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕೈರಳಿ ಪ್ರಕಾಶನ ಹೊರತಂದಿರುವ ‘ದಿ ಸಾಹಿತಿ ಕೇಳು ಮಾಸ್ತರು ಅಗಲ್ಪಾಡಿ ಅವರ ಸಿರಿಗನ್ನಡ ಸಾಹಿತಿಗಳು’ ಪುಸ್ತಕವನ್ನು ನೀಡಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ತುಳು ಭಾಷೆಯ ಬೆಳವಣಿಗೆ ಹಾಗೂ ಅದರ ಸಾಂವಿಧಾನಿಕ ಮಾನ್ಯತೆಗಾಗಿ ತುಳುವರು ಹಲವು ವರ್ಷಗಳಿಂದ ನಡೆಸಿಕೊಂಡು ಬಂದ ಹೋರಾಟ ಮತ್ತು ಪ್ರಯತ್ನಗಳು ಮಹತ್ವದ್ದಾಗಿವೆ. ತುಳು ಭಾಷೆಗೆ ಹೆಚ್ಚಿನ ಮಾನ್ಯತೆ ದೊರೆಯಬೇಕೆಂಬುದು ತುಳುವರ ಬಹುಕಾಲದ ಆಶಯವಾಗಿದೆ. ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆಯುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳನ್ನು ಎಲ್ಲರೂ ಗೌರವಿಸಬೇಕು. ತುಳು ಭಾಷೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು

ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ಇನ್ನಷ್ಟು ಬಲಗೊಳ್ಳಬೇಕಿದೆ. ಈ ಉದ್ದೇಶಕ್ಕಾಗಿ ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಬೇಕು. ತುಳು ಭಾಷೆಗೆ ಸೂಕ್ತ ಸ್ಥಾನಮಾನ ದೊರೆಯುವವರೆಗೆ ಭಾಷಾಭಿಮಾನಿಗಳು, ಸಾಹಿತಿಗಳು, ಸಂಘಸಂಸ್ಥೆಗಳು ಹಾಗೂ ತುಳುನಾಡಿನ ಜನರು ಒಗ್ಗಟ್ಟಿನಿಂದ ಪ್ರಯತ್ನಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು

ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಕಂಬಳ ಕ್ರೀಡೆಯು ಮೈಸೂರಿನಲ್ಲಿ ನಡೆಯುತ್ತಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಚಾರವಾಗಿದೆ. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ದೊರೆಯುತ್ತಿರುವ ಪ್ರೋತ್ಸಾಹವು ತುಳು ಸಂಸ್ಕೃತಿಯ ಪ್ರಸಾರಕ್ಕೆ ಸಹಕಾರಿಯಾಗಿದೆ. ಕಂಬಳವನ್ನು ಮೈಸೂರಿಗೆ ಮಾತ್ರ ಸೀಮಿತಗೊಳಿಸದೆ ದೇಶದ ರಾಜಧಾನಿ ದೆಹಲಿಯಲ್ಲಿಯೂ ಆಯೋಜಿಸುವ ಮೂಲಕ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವಂತಾಗಬೇಕು ಎಂದು ಪ್ರದೀಪ್ ಕುಮಾರ್ ಕಲ್ಕೂರ ಆಶಯ ವ್ಯಕ್ತಪಡಿಸಿದರು.

ಬದಿಯಡ್ಕದಲ್ಲಿ ನಡೆದಿದ್ದ ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ‘ತುಳು ವರ ಆಯೇನೋ’ ಕಾರ್ಯಕ್ರಮವನ್ನೂ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಗಡಿನಾಡಿನ ಪ್ರದೇಶಗಳಲ್ಲಿ ತುಳು ಭಾಷೆಯ ಉಳಿವು, ಬೆಳವಣಿಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವಿಸ್ತರಣೆಗೆ ಇಂತಹ ಕಾರ್ಯಕ್ರಮಗಳು ಮಹತ್ವದ ಕೊಡುಗೆ ನೀಡುತ್ತವೆ ಎಂದರು.

ತುಳು ಭವನದ ಮೂಲಕ ಗಡಿನಾಡಿನಲ್ಲಿ ಕನ್ನಡ, ತುಳು ಸೇರಿದಂತೆ ಭಾಷಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದುಶ್ಲಾಘನೀಯ. ಭಾಷೆಗಳ ನಡುವಿನ ಸೌಹಾರ್ದತೆ ಹಾಗೂ ಪರಸ್ಪರ ಗೌರವವನ್ನು ಬೆಳೆಸುವ ಇಂತಹ ಸಂಸ್ಥೆಗಳು ಸಮಾಜದಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯವೂ ಈ ಸಂದರ್ಭದಲ್ಲಿ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ತುಳು ಭವನದ ಕೋಶಾಧಿಕಾರಿ ತಾರಾನಾಥ ರೈ ಕಾಡಾರು ಬೀಡು, ಅಧ್ಯಕ್ಷತೆ ವಹಿಸಿದರು ,ಬೆಂಗಳೂರು ಜಿಎಸ್‌ಟಿ ವಾಣಿಜ್ಯ ತೆರಿಗೆ ಇಲಾಖೆಯ ದಶರಥಿ, ಕೃಷ್ಣ ಮೂರ್ತಿ, ಮತ್ತು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಉನ್ನೀಸ್ ಪೆರಾಜೆ, ದಸ್ತಾವೇಜು ಬರಹಗಾರ್ತಿ ವಿನುತ, ಅನಂತ ಕುಮಾರ್ ಬರ್ಲಾ, ಹರೀಶ್, ಅಖಿಲೇಶ್ ನಗುಮುಗಂ,ವಸಂತ ಮತ್ತಿತರರು ಉಪಸ್ಥಿತರಿದ್ದರು. ಸಂಘಟಕ ಗುರುರಾಜ್ ವಂದಿಸಿದರು.