ಬಂಟ್ವಾಳ : ಇಲ್ಲಿನ ಸಜಿಪಮೂಡ ಗ್ರಾಮದ ಸುಭಾಶ್ ನಗರದಲ್ಲಿ ಸುಭಾಶ್ ಯುವಕ ಮಂಡಲ ಮತ್ತು ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ವತಿಯಿಂದ ಅ.17ರಿಂದ 22ರತನಕ ‘ಸಜಿಪ ದಸರಾ’ ಶತ ಸಂಭ್ರಮ ಕಾರ್ಯಕ್ರಮ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎನ್.ವಿವೇಕ್ ಶೆಟ್ಟಿ ನಗ್ರಿಗುತ್ತು ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಳೆದ 1925ರಲ್ಲಿ ಕಂದೂರು ಅನಂತ ಐತಾಳ್ ಆರಂಭಿಸಿದ್ದ ಶಾರದಾ ಮಹೋತ್ಸವು ಬಳಿಕ ಸುಭಾಶ್ ನಗರ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ಬಿ.ಸದಾನಂದ ಪೂಂಜ ಇವರ ನೇತೃತ್ವದಲ್ಲಿ 75 ವರ್ಷಗಳನ್ನು ಪೂರೈಸಿದೆ’ ಎಂದರು.
ಈ ಬಾರಿ ಶತ ಸಂಭ್ರಮ ಪ್ರಯುಕ್ತ 6 ದಿನಗಳಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘100 ಮಂದಿ ಕಲಾವಿದರಿಂದ ವಿಭಿನ್ನ ಕಾರ್ಯಕ್ರಮ ನಡೆಯಲಿದೆ. ಬಡಕುಟುಂಬವೊAದಕ್ಕೆ ರೂ 40ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಉಚಿತ ಮನೆ ಅ.17ರಂದು ಹಸ್ತಾಂತರಿಸಲಾಗುವುದು’ ಎಂದು ಅವರು ತಿಳಿಸಿದರು.
ಅ.17ರಂದು ಬೆಳಿಗ್ಗೆ 9 ಗಂಟೆಗೆ ಶಾರದಾ ದೇವಿ ಪ್ರತಿಷ್ಠೆ ನಡೆಯಲಿದ್ದು, 12 ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಬಳಿಕ ಭಕ್ತಿ-ಭಾವ-ಲಹರಿ, ಭಜನೆ ನಡೆಯಲಿದೆ.
ಸಂಜೆ 6 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಪೇಜಾವರ ಶ್ರೀ ಆಶೀರ್ವಚನ ನೀಡಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸುವರು. 18ರಂದು ಬೆಳಿಗ್ಗೆ 8 ಗಂಟೆಗೆ ಚಂಡಿಕಾಯಾಗ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಗಾನ ವೈಭವ, ಸಂಜೆ 6 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಮುಜರಾಯಿ ಸಚಿವ ಕೆ.ಎಸ್.ಬಸವಂತಪ್ಪ, ವಿಧಾನಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮತ್ತಿತರ ಗಣ್ಯರು ಭಾಗವಹಿಸುವರು.
ಅ.19ರಂದು ಬೆಳಿಗ್ಗೆ 8 ಗಂಟೆಗೆ ಲಕ್ಷ್ಮೀ ಸಹಸ್ರನಾಮ ಯಾಗ, ಮಧ್ಯಾಹ್ನ ಮಹಾಪೂಜೆ ಬಳಿಕ ವೀರಮಣಿ ಕಾಳಗ ತಾಳಮದ್ದಳೆ, ಸಂಜೆ ಗಂಟೆ 6.30ಕ್ಕೆ ಚಾರ್ಕ ತಂಡದಿAದ ತುಳು ನಾಟಕ, ಅ.20ರಂದು ಬೆಳಿಗ್ಗೆ 8 ಗಂಟೆಗೆ ಸರಸ್ವತಿ ಸಹಸ್ರನಾಮ ಯಾಗ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಸಂಜೆ ಗಂಟೆ 6.30ರಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಪ್ರದರ್ಶನಗೊಳ್ಳಲಿದೆ. ಅ.21ರಂದು ಸಂಜೆ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಭಜನೆ ಸೇವೆ ಇದೆ ಎಂದು ಶಾರದಾ ಪೂಜಾ ಸಮಿತಿ ಅಧ್ಯಕ್ಷ ಬಿ.ಶೋಭಿತ್ ಪೂಂಜ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಭಾಶ್ ಯುವಕ ಮಂಡಲ ಅಧ್ಯಕ್ಷ ಎಸ್.ಶ್ರೀಕಾಂತ್ ಶೆಟ್ಟಿ, ಪ್ರಮುಖರಾದ ಕೀರ್ತನ್ ಆಳ್ವ ಕಾಂತಾಡಿಗುತ್ತು, ಸುಜಿತ್ ಕುಮಾರ್ ಬೇಂಕೆ ಇದ್ದರು.
