ಕಾರ್ಕಳ: ಪಾಕ್ ಉಗ್ರಗಾಮಿಗಳ ಪಹಲ್ಗಾಮ್ ಪ್ರಕರಣಕ್ಕೆ ಪ್ರತೀಕಾರವಾಗಿ ಭಾರತೀಯ ಭೂಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸ್ವದೇಶಿ ನಿರ್ಮಿತ ಆಕಾಶ್ ಮಿಸೈಲ್ ಆಪರೇಟರ್ ಆಗಿ ಯಶಸ್ವಿ ಕರ್ತವ್ಯ ನಿರ್ವಹಿಸಿದ್ದ ಎಳ್ಳಾರೆ ಇರ್ವತ್ತೂರು ಶ್ರೀಕಾಂತ್ ಭಟ್ ಅವರೊಂದಿಗೆ ಸಂವಾದ, ಅಭಿನಂದನಾ ಕಾರ್ಯಕ್ರಮ ಕಾರ್ಕಳ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ನಡೆಯಿತು. ಸಂಸ್ಥೆಯ ಪ್ರಥಮ ವರ್ಷದ ವಿದ್ಯಾ ರ್ಥಿಗಳ ಇಂಡಕ್ಷನ್ ಪ್ರೋಗ್ರಾಂ ಪ್ರಯುಕ್ತ ನಡೆದ 4ನೇ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದೇಶ ರಕ್ಷಣೆಯ ಪಾಠ ಹಾಗೂ ಭೂ ಸೇನೆಗೆ ಸೇರಲು ಪ್ರೇರೇಪಿಸಿದ ಶ್ರೀಕಾಂತ್ ಭಟ್, ತಾಂತ್ರಿಕವಾಗಿ ಭೂಸೇನೆಯಲ್ಲಿ ಲಭ್ಯವಿರುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮಾಹಿತಿ ನೀಡಿದ ಅವರು ಕಾರ್ಯಾಚರಣೆಯಲ್ಲಿ ಯೋಧರು ಗೆಲ್ಲುವುದರೊಂದಿಗೆ ಭಾರತದ ಸೇನೆಯ ಪರಾಕ್ರಮವನ್ನು ಜಗತ್ತಿಗೆ ತೋರಿಸಿಕೊಟ್ಟಿರುವುದು ತಮಗೆ ಅತೀವ ಸಂತೋಷವಾಗಿದೆ. ಭಾರತೀಯ ಪ್ರಜೆಗಳು ಯೋಧರ ಗೆಲುವಿಗೆ ಪ್ರಾರ್ಥನೆ, ಪೂಜೆಯ ಮೂಲಕ ನಿರಂತರ ಶ್ರಮಿಸಿರುವುದು ತಮ್ಮ ಮನೋ ಧೈರ್ಯ ಇನ್ನಷ್ಟು ಹೆಚ್ಚಿಸುವಂತೆ ಮಾಡಿದ್ದು, ಗೆಲುವಿನ ಕ್ರೆಡಿಟ್ ಇಡೀ ದೇಶವಾಸಿಗಳಿಗೆ ಸಲ್ಲಲಿದೆ ಎಂದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಭಾರತೀಯ ಭೂಸೇನೆಗೆ ಸೇರಲು ವಿಫುಲ ಅವಕಾಶವಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು ಅಗ್ನಿವೀರ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಸಂಸ್ಥೆಯ ಪ್ರಿನ್ಸಿಪಾಲ್ ಕುಮಾರ್ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಯೂನಿ ಯನ್ ಬ್ಯಾಂಕ್ ಹಿರಿಯ ಪ್ರಬಂಧಕ ಸುರೇಶ್, ವಿಭಾಗಾಧಿಕಾರಿಗಳಾದ ಚಿತ್ರಕುಮಾರ್ ಕೆ.ವಿ., ಪವಿತ್ರಾ ಎಸ್., ಮಲ್ಲಿಕಾ ಕೆ., ಪುನೀತ್ ಪತ್ರಕರ್ತೆ ರೇಷ್ಮಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಕಾಶ್ ರಾಠೋಡ್, ಪ್ರಜ್ವಲ್ ಡಿಸೋಜ, ಗಾಯತ್ರಿ ಮತ್ತಿತರರು ಸಿದ್ಧಪಡಿಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವಿಡಿಯೋ ಪ್ರದರ್ಶಿಸಲಾಯಿತು. ವಿದ್ಯಾರ್ಥಿ ವಿಜಯ ಆಚಾರ್ಯ ಪ್ರಾರ್ಥಿಸಿದರು. ಪ್ರವೇಶ ನಿರ್ವಾಹಕ ಗುಣಪಾಲ್ ಜೈನ್ ಸ್ವಾಗತಿಸಿದರು. ಸಿ.ಎಸ್. ವಿಭಾಗದ ಬೋಧಕ ಹರೀಶ ಕುಮಾರ ಬಿ. ಎನ್. ಕಾರ್ಯಕ್ರಮ ನಿರೂಪಿಸಿದರು. ಬೋಧಕ ಬಾಲಚಂದ್ರ ಹೆಬ್ಬಾರ್ ಯೋಧರನ್ನು ಪರಿಚಯಿಸಿದರು. ಸಹಾಯಕ ಬೋಧಕ ಸುಬ್ರಮಣ್ಯ ವಂದಿಸಿದರು.