ಜೇಸನ್ ಡಯಾಸ್‌ಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನ

0
10

ಉಡುಪಿ : ಉದ್ಯಮ, ಕ್ರೀಡೆ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮಾಂಡವಿ ಬಿಲ್ಡರ್ಸ್‌ನ ಪ್ರವರ್ತಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಅವರ ಪುತ್ರ ಜೇಸನ್ ಡಯಾಸ್ ಅವರನ್ನು ತುಳುನಾಡ ರಕ್ಷಣಾ ವೇದಿಕೆ (ರಿ.), ಉಡುಪಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಆ.16ರಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಜೇಸನ್ ಡಯಾಸ್ ಅವರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

1991ರ ನವೆಂಬರ್ 8ರಂದು ಕಲ್ಯಾಣಪುರದಲ್ಲಿ ಜೆರ್ರಿ ವಿನ್ಸೆಂಟ್ ಡಯಾಸ್ ಹಾಗೂ ಮೋಲಿ ಡಯಾಸ್ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಜೇಸನ್ ಡಯಾಸ್ ಅವರು ಸೈಂಟ್ ಮಿಲಾಗ್ರಿಸ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿ, ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿ ಪಡೆದಿದ್ದಾರೆ.

2014ರಿಂದ ತಂದೆಯ ಉದ್ಯಮಕ್ಕೆ ಕೈಜೋಡಿಸಿರುವ ಅವರು ಸಹೋದರನೊಂದಿಗೆ ಮಾಂಡವಿ ಬಿಲ್ಡರ್ಸ್ ಸಂಸ್ಥೆಯ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ. ವಿದೇಶಗಳಲ್ಲಿ ಉದ್ಯೋಗಾವಕಾಶಗಳಿದ್ದರೂ ಕುಟುಂಬದ ಉದ್ಯಮದೊಂದಿಗೆ ಗುರುತಿಸಿಕೊಂಡು ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲೂ ಗಮನಾರ್ಹ ಸೇವೆ

ಜೇಸನ್ ಡಯಾಸ್ ಅವರು ಉಡುಪಿ ಜಿಲ್ಲಾ ಬಾಡಿಬಿಲ್ಡರ್ಸ್ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷರಾಗಿ ಹಾಗೂ ರಾಜ್ಯ ಬಾಡಿಬಿಲ್ಡರ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ, ಸಹೋದರ ಹಾಗೂ ಮಾಂಡವಿ ಬಿಲ್ಡರ್ಸ್‌ನ ಸಹಕಾರದೊಂದಿಗೆ ಹಲವು ವರ್ಷಗಳಿಂದ ದೇಹದಾಢ್ಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಇದರೊಂದಿಗೆ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಸಂತೆಕಟ್ಟೆಯ ಅಧ್ಯಕ್ಷರಾಗಿ ಹಾಗೂ ಬಳಿಕ ವಲಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅವರು, ಹಲವು ವರ್ಷಗಳಿಂದ ಜಿಲ್ಲಾ ಕ್ಯಾಬಿನೆಟ್‌ನ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಸಕ್ರಿಯರಾಗಿರುವ ಜೇಸನ್ ಡಯಾಸ್ ಅವರು ಮೌಂಟ್ ರೋಸರಿ ದೇವಾಲಯದ ಆರ್ಥಿಕ ಸಮಿತಿ, ಪಾಲನ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ.

ಉದ್ಯಮ, ಕ್ರೀಡೆ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಯುವಜನತೆಗೆ ಮಾದರಿಯಾಗಿರುವ ಜೇಸನ್ ಡಯಾಸ್ ಅವರ ಕಠಿಣ ಪರಿಶ್ರಮ, ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆಗಳನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕವು ಗೌರವಿಸಿದೆ.

ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.