ಮೂಡುಬಿದಿರೆ : ತಾಲೂಕಿನ ಪುರಸಭಾ ವ್ಯಾಪ್ತಿಯ ವಿಶಾಲನಗರದ ರಸ್ತೆ ಬದಿಯಲ್ಲಿ ದನವೊಂದು ಭೀಕರ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಸ್ಥಳೀಯರು ಗಮನಿಸಿದಂತೆ, ದನದ ರುಂಡದ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳ ಗುರುತುಗಳು ಕಂಡುಬಂದಿವೆ. ದನದ ಮೇಲೆ ಯಾವುದಾದರೂ ವಾಹನ ಹರಿದಿರಬಹುದೇ ಅಥವಾ ಬೇರೆ ಕಾರಣದಿಂದ ಈ ದುರ್ಘಟನೆ ಸಂಭವಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೂಡುಬಿದಿರೆ ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ದನವನ್ನು ತೆರವುಗೊಳಿಸಿ ದಫನ ಕಾರ್ಯ ನೆರವೇರಿಸಿದರು.

