ಉಡುಪಿ: ಶಿರ್ವ ಗ್ರಾಮದ ಕಲೋಟ್ಟು ಸೇತುವೆಯ ಕೆಳಗಡೆ ಹರಿಯುವ ಪಾಪನಾಶಿನಿ ಹೊಳೆಯಲ್ಲಿ ಹಸುವೊಂದನ್ನು ಕಡಿದು, ಅದರ ಅವಶೇಷಗಳನ್ನು ಎಸೆದು ವಿಕೃತಿ ಮೆರೆದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಕಲೋಟ್ಟು ಸೇತುವೆಯ ಕೆಳಗಿನ ಪಾಪನಾಶಿನಿ ಹೊಳೆಯ ನೀರಿನಲ್ಲಿ ಜಾನುವಾರಿನ ತಲೆಬುರುಡೆ ಹಾಗೂ ಕಾಲುಗಳು ಬಿದ್ದಿರುವ ಬಗ್ಗೆ ಶಿರ್ವ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಠಾಣಾ ಎಎಸ್‌ಐ ಸುರೇಶ್ ಕುಮಾರ್ ಹಾಗೂ ಪಿಸಿ ಅರುಣ ಕುಮಾರ ಕೆ.ಎಂ. ಅವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಘಟನೆ ನಡೆದಿರುವುದು ದೃಢಪಟ್ಟಿದೆ.
ನೀರಿನಲ್ಲಿದ್ದ ಅವಶೇಷಗಳನ್ನು ಪರಿಶೀಲಿಸಿದಾಗ, ಸೇತುವೆಯ ದಕ್ಷಿಣ ಭಾಗದ ನೀರಿನಲ್ಲಿ ಚರ್ಮವಿಲ್ಲದ, ಹಲ್ಲುಗಳು ಮತ್ತು ಮೂಗಿನ ಹೊಳ್ಳೆಗಳನ್ನು ಒಳಗೊಂಡ ಜಾನುವಾರಿನ ಮೇಲ್ದವಡೆಯ ಪೂರ್ತಿ ಭಾಗ ಪತ್ತೆಯಾಗಿದೆ. ಇದು ಹಸುವಿನ ತಲೆಯ ಭಾಗವಾಗಿರಬಹುದು ಎಂದು ಪಶು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸ್ವಲ್ಪ ದೂರದಲ್ಲಿ ಜಾನುವಾರಿನ ಕಾಲಿನ ಎರಡು ಗೆರಸುಗಳು (ಖುರಗಳು), ಮಾಂಸದ ತುಂಡುಗಳು ಹಾಗೂ ಹೊಟ್ಟೆಯ ಒಳಗಿನ ಭಾಗಗಳು ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಇವು ಕೂಡ ಹಸುವಿನದ್ದೇ ಅವಶೇಷಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ‘ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

