Saturday, June 14, 2025
HomeUncategorizedಸತತ ಅಧ್ಯಯನದಿಂದ ಸತ್ವ ಪೂರ್ಣ ಸಾಹಿತ್ಯ ಸೃಷ್ಟಿ: ರಾ. ಶಿರೂರು

ಸತತ ಅಧ್ಯಯನದಿಂದ ಸತ್ವ ಪೂರ್ಣ ಸಾಹಿತ್ಯ ಸೃಷ್ಟಿ: ರಾ. ಶಿರೂರು

ಮಾನವನು ತನ್ನ ಭಾವನೆಯನ್ನು ನೋವು ನಲಿವುಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತ ಪಡಿಸುತ್ತಾನೆ. ಕವಿಯಾದವನು ಭಾವ ಪ್ರಪಂಚದಲ್ಲಿ ವಿಹರಿಸುತ್ತಾ ಇರುತ್ತಾನೆ. ಸತತ ಅಧ್ಯಯನದಿಂದ ಸತ್ವ ಪೂರ್ಣ ಸಾಹಿತ್ಯ ನಿರ್ಮಾಣ ಸಾಧ್ಯ ಎಂದು ಮೂಡುಬಿದಿರೆಯ ಅಧ್ಯಾಪಕ-ಕವಿ – ಸಾಹಿತಿ ಡಾ.ರಾಮಕೃಷ್ಣ ಶಿರೂರು ತಿಳಿಸಿದರು.

ಧಾರವಾಡದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದೀಪ ಸಾಹಿತ್ಯ ಪ್ರತಿಷ್ಠಾನದ ಕಾಯಕಯೋಗಿಗೊಂದು ಕಾವ್ಯ ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಕಾವ್ಯ ಸೃಷ್ಟಿಯ ಕುರಿತು ಮಾತನಾಡಿದರು.

ಕರ್ನಾಟಕ ರಾಜ್ಯ ಅಕ್ಷರದೀಪ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪ್ರವೀಣ್ ಕುಮಾರ್ ಕನ್ಯಾಳ ಅವರ ಸಾಹಿತ್ಯ ಸೇವೆ ಅಮೋಘವಾದುದು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕಾರ್ಯವನ್ನು ಅಕ್ಷರ ದೀಪ ಸಾಹಿತ್ಯ ಪ್ರತಿಷ್ಠಾನ ನಡೆಸುತ್ತಾ ಬಂದಿದೆ. ಅವರ ನಾಡು ನುಡಿಯ ಸೇವೆಯ ಕನ್ನಡದ ಮನಸ್ಸನ್ನು ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ಕೈ ಜೋಡಿಸೋಣ, ಬೆಂಬಲಿಸೋಣ ಎಂದು ಶುಭ ಹಾರೈಸಿದರು.

ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಹಳೆಗನ್ನಡ ಮತ್ತು ಹೊಸಗನ್ನಡ ಕಾವ್ಯಗಳನ್ನು ಅಧ್ಯಯನ ಮಾಡುವುದು ಅವಶ್ಯ. ಕನ್ನಡ ಕಾವ್ಯ ಪರಂಪರೆಯ ಬಗ್ಗೆ ಮತ್ತು ಕವಿಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕು. ಹೀಗೆ ಕಾವ್ಯದ ಓದಿನ ವಿಸ್ತಾರದಿಂದ ಸತ್ವ ಪೂರ್ಣ ಕಾವ್ಯ ನಿರ್ಮಾಣಗೊಳ್ಳುತ್ತದೆ. ಕಾವ್ಯ ಪ್ರಕಾರಗಳಾದ ಚಂಪೂ, ಕಂದಪದ್ಯ, ಷಟ್ಪದಿ, ರಗಳೆ, ಸಾಂಗತ್ಯ, ತ್ರಿಪದಿ ಮತ್ತು ಹೊಸಗನ್ನಡದ ಛಂದೋ ಪ್ರಕಾರಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಭಾವ ಪ್ರಪಂಚ ವಿಸ್ತಾರ ಗೊಳ್ಳುತ್ತದೆ.ಪಂಪ, ರನ್ನ, ಜನ್ನ, ರಾಘವಾಂಕ, ಹರಿಹರ, ಕುಮಾರವ್ಯಾಸ,ಲಕ್ಷ್ಮೀಶ ಮುಂತಾದ ಹಳೆಗನ್ನಡದ ಕವಿಗಳ ಬಗ್ಗೆ ಮತ್ತು ಬಿ. ಎಂ. ಶ್ರೀಕಂಠಯ್ಯ, ಕುವೆಂಪು, ದ.ರಾ. ಬೇಂದ್ರೆ, ಜಿ. ಎಸ್. ಶಿವರುದ್ರಪ್ಪ ಮುಂತಾದವರ ಕವನಗಳನ್ನು ಅಧ್ಯಯನ ಮತ್ತು ಅವಲೋಕನ ಮಾಡುವುದರ ಮೂಲಕ ನಮ್ಮ ಭಾವ ಪ್ರಪಂಚವನ್ನು ವಿಸ್ತರಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದೀಪ ಸಾಹಿತ್ಯ ವೇದಿಕೆ ಮುಂಬೈ ಅಂತರ್ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀಮತಿ ಗಾಯಿತ್ರಿ ನಾಗೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಧಾರವಾಡ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ
ಡಾ. ಲಿಂಗರಾಜ ಅಂಗಡಿ, ಅಕ್ಷರ ದೀಪ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪ್ರವೀಣ್ ಕುಮಾರ್ ಕನ್ಯಾಳ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ರತ್ನಾ ಬದಿ, ಸಾಹಿತ್ಯ ಸಂಘಟಕರಾದ ಶ್ರೀ ಚಂದ್ರಶೇಖರ ಮಾಡಲಗೇರಿ, ಶಿಕ್ಷಕರೂ, ಸಾಹಿತ್ಯ ಸಂಘಟಕರೂ ಆಗಿರುವ ಶ್ರೀ ಗಣಪತಿ ಹೆಗಡೆ ದಾಂಡೇಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕವಿಗಳಿಂದ ರಾಜ್ಯಮಟ್ಟದ ಕವಿಗೋಷ್ಠಿ ಸಂಪನ್ನಗೊಂಡಿತು.
ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾಯಕಯೋಗಿ ರಾಷ್ಟ್ರಪ್ರಶಸ್ತಿಯನ್ನು ಹಲವು ಸಾಧಕರಿಗೆ ನೀಡಿ ಗೌರವಿಸಲಾಯಿತು.

RELATED ARTICLES
- Advertisment -
Google search engine

Most Popular