ಬೆಂಗಳೂರು : ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿ ಮರುಬಳಕೆ ಮಾಡುವುದರಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಹೊಸ ಮಾರ್ಗಸೂಚಿ ರೂಪಿಸಲು ಮುಂದಾಗಿವೆ.
ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿ ಬಳಸುವುದರಿಂದ ಎಣ್ಣೆಯಲ್ಲಿ ಟೋಟಲ್ ಪೋಲಾರ್ ಕಾಂಪೌಂಡ್ಸ್ (TPC) ಪ್ರಮಾಣ ಹೆಚ್ಚಾಗುತ್ತದೆ. FSSAI ಪ್ರಕಾರ TPC ಪ್ರಮಾಣ ಶೇ.25ಕ್ಕಿಂತ ಹೆಚ್ಚಾದ ಎಣ್ಣೆಯನ್ನು ಮಾನವ ಬಳಕೆಗೆ ಬಳಸಬಾರದು.
ಮೂರು ಬಾರಿ ಮೀರದಂತೆ ಬಳಕೆ
ಹೊಸ ಮಾರ್ಗಸೂಚಿಯ ಪ್ರಸ್ತಾವನೆಯಂತೆ ಅಡುಗೆ ಎಣ್ಣೆಯನ್ನು ಮೂರಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿ ಬಳಸುವುದನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಎಣ್ಣೆಯಿಂದ ನೀಲಿ-ಬೂದು ಹೊಗೆ ಕಾಣಿಸಿಕೊಳ್ಳುವುದು, ನೊರೆ ಉಂಟಾಗುವುದು ಅಥವಾ ಎಣ್ಣೆಯ ಬಣ್ಣ ಗಾಢವಾಗುವುದು ಕಂಡುಬಂದರೆ ಅದನ್ನು ಆಹಾರ ತಯಾರಿಕೆಗೆ ಬಳಸಬಾರದು.
ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ತಯಾರಿಕಾ ಘಟಕಗಳು ಬಳಸಿದ ಎಣ್ಣೆಯ ಪ್ರಮಾಣ ಮತ್ತು ಅದರ ವಿಲೇವಾರಿ ಕುರಿತು ದಾಖಲೆಗಳನ್ನು ನಿರ್ವಹಿಸುವ ವ್ಯವಸ್ಥೆ ಜಾರಿಗೆ ಬರಬಹುದಾಗಿದೆ.
ಬಳಸಿದ ಎಣ್ಣೆಯಿಂದ ಜೈವಿಕ ಇಂಧನ
ಬಳಸಿದ ಅಡುಗೆ ಎಣ್ಣೆಯನ್ನು ಚರಂಡಿ ಅಥವಾ ಒಳಚರಂಡಿಗೆ ಸುರಿಯುವುದನ್ನು ತಪ್ಪಿಸಿ, ಅದನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಮರುಬಳಕೆಗೆ ನೀಡುವ ಆರ್‌ಯುಸಿಒ (RUCO) ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. FSSAIಯ RUCO ಯೋಜನೆಯಡಿ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಜೈವಿಕ ಡೀಸೆಲ್ ಸೇರಿದಂತೆ ಕೈಗಾರಿಕಾ ಬಳಕೆಗೆ ಕಳುಹಿಸುವ ವ್ಯವಸ್ಥೆ ಇದೆ.
ಕರ್ನಾಟಕದಲ್ಲಿ 2024–25 ಮತ್ತು 2025–26ನೇ ಸಾಲಿನಲ್ಲಿ 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಪುನರ್ಬಳಕೆಗೆ ನೀಡಲಾಗಿದೆ ಎಂದು ವರದಿಯಾಗಿದೆ.
ಬಳಸಿದ ಎಣ್ಣೆಯನ್ನು ಆಹಾರ ಸರಪಳಿಗೆ ಮರಳದಂತೆ ತಡೆಯುವುದರ ಜತೆಗೆ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

