ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ಮೃತದೇಹವನ್ನು ತುಂಡುಗಳಾಗಿ ವಿಲೇವಾರಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿಪುರಂ ನಿವಾಸಿ, ಮಾಂಸದಂಗಡಿ ನಡೆಸುತ್ತಿದ್ದ ಮೊಹಮ್ಮದ್ ಶಫಿ (35) ಎಂಬಾತನನ್ನು ಪೊಲೀಸರು ಬಂಧಿಸಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಸಂಭವಿಸಿದೆ.
ಮಂಗಳಗಿರಿ ಮೂಲದ ಕಲ್ಯಾಣಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಸೆ.18ರಂದು ಇಬ್ರಾಹಿಂಪಟ್ನಂನ ವಿಟಿಪಿಎಸ್ ಕೂಲಿಂಗ್ ಕಾಲುವೆಯಲ್ಲಿ ಮಹಿಳೆಯ ಮೃತದೇಹದ ಭಾಗವೊಂದು ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಮಾಹಿತಿ ಪಡೆದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದು, ಡ್ರೋನ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯ ನೆರವಿನಿಂದ ಕಾಲುವೆಯಲ್ಲಿ ಮತ್ತಷ್ಟು ಶೋಧ ನಡೆಸಿದ್ದಾರೆ. ಈ ವೇಳೆ ಮೃತಳ ತಲೆ, ಕಾಲುಗಳು ಸೇರಿದಂತೆ ದೇಹದ ಇತರ ಭಾಗಗಳು ಪತ್ತೆಯಾಗಿವೆ. ಒಂದು ಕೈ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆಯಾದ ದೇಹದ ಭಾಗಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತಳ ಗುರುತು ಪತ್ತೆಗಾಗಿ ಮಾಹಿತಿ ಹಂಚಿಕೊಂಡಿದ್ದರು. ಈ ವೇಳೆ ಮೃತಳ ಸಹೋದರರು ಕೈ ಮೇಲಿದ್ದ ಹಚ್ಚೆ ಸೇರಿದಂತೆ ಇತರ ಗುರುತುಗಳ ಆಧಾರದ ಮೇಲೆ ಆಕೆಯನ್ನು ಕಲ್ಯಾಣಿ ಎಂದು ಗುರುತಿಸಿದ್ದಾರೆ.
ಹಣ ಹಾಗೂ ಮಗುವಿನ ವಿಚಾರಕ್ಕೆ ಕಲಹ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸೆ.17ರಂದು ಭವಾನಿಪುರಂನಲ್ಲಿರುವ ಆರೋಪಿ ಶಫಿಯ ಮನೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಶಫಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಗುಂಟೂರಿಗೆ ಕಳುಹಿಸಿದ ಬಳಿಕ ಕಲ್ಯಾಣಿಯನ್ನು ಮನೆಗೆ ಕರೆಸಿಕೊಂಡಿದ್ದ. ಹಣ ಹಾಗೂ ಮಗುವಿನ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಕಲ್ಯಾಣಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಮೃತದೇಹವನ್ನು ವಿಲೇವಾರಿ ಮಾಡುವ ಉದ್ದೇಶದಿಂದ ದೇಹದ ಭಾಗಗಳನ್ನು ಬೇರ್ಪಡಿಸಿ ವಿಟಿಪಿಎಸ್ ಕೂಲಿಂಗ್ ಕಾಲುವೆಗೆ ಎಸೆದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ತನಿಖೆ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೆ.27ರಂದು ಶಫಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕತ್ತಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಶಫಿಗೆ ನೆರವು ನೀಡಿದ ಆರೋಪದ ಮೇಲೆ ಆತನ ಸ್ನೇಹಿತ ಅಬ್ದುಲ್ಲಾ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆತನ ಪತ್ತೆಗೆ ಶೋಧ ಮುಂದುವರಿದಿದೆ.
ಮೃತಳ ಮಗು ಸದ್ಯ ಆರೋಪಿಯ ಪತ್ನಿಯ ವಶದಲ್ಲಿದ್ದು, ಮಗುವಿನ ಕಾನೂನುಬದ್ಧ ಪಾಲನೆ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

