ಮಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಬೆಂಗಳೂರು ಹಾಗೂ ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕರೆನ್ಸಿ ನಿರ್ವಹಣಾ ಸಮಿತಿ ಸಭೆ ಮತ್ತು ಕರೆನ್ಸಿ ನಿರ್ವಹಣೆ ಕುರಿತ ಜಾಗೃತಿ ಕಾರ್ಯಕ್ರಮವು ಅಕ್ಟೋಬರ್ 9ರಂದು ಮಂಗಳೂರಿನ ಕೊಟ್ಟಾರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಕರೆನ್ಸಿ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಹಾಗೂ ಆರ್ಬಿಐನ ‘ಶುದ್ಧ ನೋಟು ನೀತಿ’ (Clean Note Policy) ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಆರ್ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಜನರಲ್ ಮ್ಯಾನೇಜರ್ ಸಂಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮಂಗಳೂರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತ ಸಮ್ ವರ್ಗೀಸ್ (ಐಪಿಎಸ್) ಸೇರಿದಂತೆ ಆರ್ಬಿಐನ ಹಿರಿಯ ಅಧಿಕಾರಿಗಳು, ವಿವಿಧ ಬ್ಯಾಂಕ್ಗಳ ಪ್ರತಿನಿಧಿಗಳು, ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಕ್ಷೇತ್ರದ ಇತರ ಪ್ರಮುಖರು ಭಾಗವಹಿಸಿದ್ದರು.
ಆರ್ಬಿಐನ ಸಹಾಯಕ ಮಹಾಪ್ರಬಂಧಕಿ ತೃಪ್ತಾ ರಾಯ್, ವ್ಯವಸ್ಥಾಪಕ ಅವಿನಾಶ್, ಕೆನರಾ ಬ್ಯಾಂಕ್ ಮಂಗಳೂರು ವೃತ್ತದ ಮಹಾಪ್ರಬಂಧಕ ಹಾಗೂ ವೃತ್ತ ಮುಖ್ಯಸ್ಥ ಮಂಜುನಾಥ್ ಬಿ. ಸಿಂಗಾಯಿ, ಕೆನರಾ ಬ್ಯಾಂಕ್ ಸಿಎಂಎಸ್ ಹೆಚ್ಒ ಆನೆಕ್ಸ್ ಮಣಿಪಾಲದ ಮಹಾಪ್ರಬಂಧಕ ಎಚ್.ಟಿ. ಭಾಸ್ಕರ್, ಬ್ಯಾಂಕ್ ಆಫ್ ಬರೋಡಾದ ಮಹಾಪ್ರಬಂಧಕ ರಾಜೇಶ್ ಖನ್ನಾ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಹಾಪ್ರಬಂಧಕ ಸತ್ಯಂ ಪಲುಗುಣ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಕರೆನ್ಸಿ ನಿರ್ವಹಣೆಯ ಕಾರ್ಯವಿಧಾನಗಳು, ನಕಲಿ ಭಾರತೀಯ ಕರೆನ್ಸಿ ನೋಟುಗಳ ಪತ್ತೆ ಹಾಗೂ ನಗದು ನಿರ್ವಹಣೆಯ ಪರಿಣಾಮಕಾರಿ ಕ್ರಮಗಳ ಕುರಿತು ಮಾಹಿತಿ ನೀಡಿದರು.

ನೋಟುಗಳ ಭದ್ರತಾ ಲಕ್ಷಣಗಳ ಕುರಿತು ಮಾಹಿತಿ
ಕಾರ್ಯಕ್ರಮದ ತಾಂತ್ರಿಕ ಅಧಿವೇಶನಗಳಲ್ಲಿ ಭಾರತೀಯ ಕರೆನ್ಸಿ ನೋಟುಗಳ ವೈಶಿಷ್ಟ್ಯಗಳು, ಪ್ರಮುಖ ಭದ್ರತಾ ಲಕ್ಷಣಗಳು, ನಕಲಿ ನೋಟುಗಳನ್ನು ಗುರುತಿಸುವ ವಿಧಾನಗಳು, ನೋಟು ವಿನಿಮಯ ಸೌಲಭ್ಯಗಳು, ನೋಟು ಮರುಪಾವತಿ ನಿಯಮಗಳು ಹಾಗೂ ಹಾನಿಗೊಳಗಾದ ನೋಟುಗಳ ಪರಿಶೀಲನೆ ಮತ್ತು ನಿರ್ಧಾರ ಪ್ರಕ್ರಿಯೆಗಳ ಕುರಿತು ಆರ್ಬಿಐ ಅಧಿಕಾರಿಗಳು ವಿವರಿಸಿದರು.
ನೋಟುಗಳನ್ನು ಸರಿಯಾಗಿ ನಿರ್ವಹಿಸುವುದು, ನಗದು ವಹಿವಾಟಿನಲ್ಲಿ ನಿಯಮಗಳನ್ನು ಪಾಲಿಸುವುದು ಹಾಗೂ ಆರ್ಬಿಐನ ಮಾರ್ಗಸೂಚಿಗಳ ಬಗ್ಗೆ ಬ್ಯಾಂಕ್ಗಳು ಮತ್ತು ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವು ಮಹತ್ವದ ವೇದಿಕೆಯಾಯಿತು. ಆರ್ಬಿಐ, ಬ್ಯಾಂಕ್ಗಳು, ಗ್ರಾಹಕರು ಹಾಗೂ ಇತರ ಪಾಲುದಾರರ ನಡುವೆ ಸಂವಾದ ಮತ್ತು ಅಭಿಪ್ರಾಯ ವಿನಿಮಯಕ್ಕೂ ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದ ಸಮನ್ವಯವನ್ನು ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ ನಿರ್ವಹಿಸಿದ್ದು, ಕೆನರಾ ಬ್ಯಾಂಕ್ನ ನಗದು ನಿರ್ವಹಣಾ ವಿಭಾಗ, ಹೆಚ್ಒ ಆನೆಕ್ಸ್ ಮಣಿಪಾಲ ಸಹಕಾರ ನೀಡಿತು.

