ತುಳುವ ಮಹಾಸಭೆ ಶತಮಾನೋತ್ಸವದ ಮೂರನೇ ಕಾರ್ಯಕ್ರಮವಾಗಿ ತುಳು ಲಿಪಿ ಕಾರ್ಯಾಗಾರ

0
3

ಪುತ್ತೂರು : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ಮೂರನೇ ಕಾರ್ಯಕ್ರಮವಾಗಿ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ತುಳು ಲಿಪಿ ಕಾರ್ಯಾಗಾರ ನಡೆಯಿತು.

ತುಳುವರ್ಲ್ಡ್ ಫೌಂಡೇಶನ್, ಕಟೀಲು, ತುಳುವ ಮಹಾಸಭೆ ಪುತ್ತೂರು ವಲಯ, ಐಕ್ಯೂಎಸಿ (IQAC), ತುಳು ಸಂಘ ಹಾಗೂ ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ತುಳುವ ಮಹಾಸಭೆಯ ಶತಮಾನೋತ್ಸವದ ಸಂದರ್ಭದಲ್ಲಿ ತುಳುನಾಡಿನ ಭಾಷೆ, ಲಿಪಿ, ಸಂಸ್ಕೃತಿ, ಜನಪದ ಪರಂಪರೆ ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ತುಳು ಲಿಪಿಯ ಪರಿಚಯ ಮಾಡಿಕೊಡುವ ಕಾರ್ಯಾಗಾರವು ಮಹತ್ವ ಪಡೆದುಕೊಂಡಿತು.

ಕಾರ್ಯಕ್ರಮವನ್ನು ತುಳುವ ಮಹಾಸಭೆ ಪುತ್ತೂರು ವಲಯದ ಸಂಚಾಲಕರಾದ ಮನೋಹರ್ ರೈ ಮನವಳಿಕೆ ಗುತ್ತು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಂದಕಿಶೋರ್ ಎಸ್. ಅವರು ಅಧ್ಯಕ್ಷತೆ ವಹಿಸಿದ್ದರು. ತುಳುವ ಮಹಾಸಭೆ ಪುತ್ತೂರು ವಲಯದ ಅಧ್ಯಕ್ಷರಾದ ಲಯನ್ ವೇದಾವತಿ ರಾಜೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸರಿತಾ ಜನಾರ್ಧನ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ,ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ, ಅವರು ವಿದ್ಯಾರ್ಥಿನಿಯರಿಗೆ ತುಳು ಲಿಪಿಯ ಪರಿಚಯ ನೀಡಿ, ಅದರ ವೈಶಿಷ್ಟ್ಯಗಳು ಹಾಗೂ ಬರವಣಿಗೆಯ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ತುಳುವರ್ಲ್ಡ್ ಫೌಂಡೇಶನ್‌ನ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ, ಅಧ್ಯಕ್ಷರಾದ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಸಂತ ರೈ ಕುತ್ತೆತ್ತೂರು ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ಉಪನ್ಯಾಸಕಿಯಾದ ಡಾ. ಮಲ್ಲಿಕಾ ಕುಮಾರಿ, ರೇಷ್ಮಾ ಶೆಟ್ಟಿ ಕಂಪ ಹಾಗೂ ಇಂದಿರಾ ಎಸ್. ರೈ ಅವರು ಭಾಗವಹಿಸಿದರು.

ಪೂಜಾಶ್ರೀ ಸ್ವಾಗತಿಸಿದರು. ಲಿಖಿತ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಎಚ್. ವಂದನಾರ್ಪಣೆ ಸಲ್ಲಿಸಿದರು.

ತುಳುವ ಮಹಾಸಭೆಯ ಶತಮಾನೋತ್ಸವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ತುಳುನಾಡಿನ ಭಾಷೆ, ಲಿಪಿ, ಸಂಸ್ಕೃತಿ ಮತ್ತು ಪರಂಪರೆಯ ಪುನರುಜ್ಜೀವನಕ್ಕೆ ಪೂರಕವಾದ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣಗೊಳಿಸುವುದು ಈ ಅಭಿಯಾನದ ಆಶಯವಾಗಿದೆ. ಅದರ ಭಾಗವಾಗಿ ನಡೆದ ಈ ತುಳು ಲಿಪಿ ಕಾರ್ಯಾಗಾರವು ವಿದ್ಯಾರ್ಥಿನಿಯರಲ್ಲಿ ತುಳು ಭಾಷೆ ಮತ್ತು ಲಿಪಿಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು.