ಉಡುಪಿ: ಹೈಕೋರ್ಟ್ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣಪತಿ ವಿಗ್ರಹ ತಯಾರಿ, ಮಾರಾಟ, ವಿಸರ್ಜನೆ ನಿಷೇಧಿಸಲಾಗಿದೆ. ಈ ರೀತಿಯ ಲೋಹ ಮಿಶ್ರಿತ, ರಾಸಾಯನಿಕ ಬಣ್ಣ ಬಳಸಿದ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಿದರೆ ಜಲಜೀವಿಗಳಿಗೆ ಅಪಾಯದ ಜೊತೆಗೆ ಮಾನವನಿಗೆ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುವ ಸಾಧ್ಯತೆ ಇದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಸನ್ಮತಿ ಪತ್ರಿಕೆಯ ಆಗಸ್ಟ್ ತಿಂಗಳ ಸಂಚಿಕೆ ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.
ಪಿಒಪಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆಗೆ ಪರವಾನಗಿ ನೀಡುತ್ತಿಲ್ಲ. ಈ ಸಂಬಂಧ ನಿಷೇಧ ಆದೇಶವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಸಹಿತ ವಿವಿಧ ಇಲಾಖೆಗಳಾದ್ದಾಗಿದೆ. ಆವೆ ಮಣ್ಣಿನಲ್ಲಿ ಗಣಪತಿ ವಿಗ್ರಹ ತಯಾರಿಗೆ ಉತ್ತೇಜನ ನೀಡಬೇಕು. ಗಣಪತಿ ವಿಗ್ರಹಕ್ಕೆ ಬಳಸಿದ ಹೂ, ಅಲಂಕಾರ ಸಾಮಗ್ರಿ ತೆಗೆದು ವಿಸರ್ಜಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ ೧೦ರಿಂದ ಬೆಳಗ್ಗೆ ೬ರ ತನಕ ಮೈಕ್ ಬಳಸುವಂತಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ್ದು ಜಪ್ತಿ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜಲಮೂಲಗಳ ಮೇಲೆ ಮಂಡಳಿ ನಿಗಾ ಇಡಲಿದೆ. ಹರಿವ ನೀರಿನ ಬದಲು ಬಕೆಟ್, ತೊಟ್ಟಿ, ಟ್ಯಾಂಕ್‌ಗಳಲ್ಲಿ ವಿಗ್ರಹ ವಿಸರ್ಜಿಸುವುದು ಸೂಕ್ತವಾಗಿದೆ. ಕೆಲ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಗಣಪತಿ ವಿಗ್ರಹ ವಿಸರ್ಜನೆಗೆ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡುತ್ತಿವೆ. ಅರಶಿನ, ಕಾಗದ, ಎಲೆ, ನಾನಾ ಹಿಟ್ಟುಗಳಲ್ಲಿ ಗಣಪತಿ ವಿಗ್ರಹವನ್ನು ತಯಾರಿಸಿ ವಿಸರ್ಜಿಸುವ ಕ್ರಮ ಪರಿಸರ ಸ್ನೇಹಿಯಾಗಲಿದೆ ಎಂದು ಅವರು ಹೇಳಿದರು.
ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುದರ್ಶನ್ ದೊಡಮನಿ, ಉಪ ಪರಿಸರ ಅಧಿಕಾರಿ ಡಾ.ಅಮೃತಾ, ಉಡುಪಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಯಶೋಧಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.

