ಮಂಗಳೂರು : ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಆಶ್ರಯದಲ್ಲಿ ಮತ್ತು ಮಡಿಯಾಲ ನಾರಾಯಣ ಭಟ್ ಉನ್ನತ ಶಿಕ್ಷಣ ಕೇಂದ್ರದ ಆಯೋಜನೆಯಲ್ಲಿ, ಮಂಗಳೂರಿನ ಮೇರಿಹಿಲ್‌ನಲ್ಲಿರುವ ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಜೆ 05:00 ಗಂಟೆಗೆ ‘ದಿವ್ಯ ಸಂಜೆ’ ವಿಶೇಷ ಬೋಧಪ್ರದ ಹಾಗೂ ಸಂವಾದ ಕಾರ್ಯಕ್ರಮವು ನಡೆಯಲಿದೆ.
”ವಸುಧೈವ ಕುಟುಂಬಕಂ” ಅಂದರೆ ‘ಒಂದು ಜಗತ್ತು ಒಂದು ಕುಟುಂಬ’ ಎಂಬ ಉದಾತ್ತ ತತ್ತ್ವದಡಿ ಜಾಗತಿಕ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ಅಭಿಯಾನವು, ಎಲ್ಲರಿಗೂ ಉಚಿತ ಪೌಷ್ಟಿಕ ಆಹಾರ, ಅಕ್ಷರ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಾ ಸಾವಿರಾರು ಫಲಾನುಭವಿಗಳ ಜೀವನವನ್ನು ಹಸನುಗೊಳಿಸಿದೆ.
ಸದ್ಗುರು ಮಧುಸೂದನ ಸಾಯಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಸಮಾವೇಶವು ಸಮಾಜದಲ್ಲಿ ಸೇವೆ, ಕರುಣೆ ಹಾಗೂ ಸಾಮೂಹಿಕ ಒಳಿತನ್ನು ಬಿತ್ತುವ ವಿನಮ್ರ ಹೆಜ್ಜೆಯಾಗಿದೆ.
ಈ ಕಾರ್ಯಕ್ರಮದ ಮುಖ್ಯ ಮುಖ್ಯಾಂಶವೆಂದರೆ ಸದ್ಗುರು ಮಧುಸೂದನ ಸಾಯಿ ಅವರೊಂದಿಗೆ ನಡೆಯುವ ಸ್ಪೂರ್ತಿದಾಯಕ ಹಾಗೂ ಸೌಹಾರ್ದಯುತ ಸಂವಾದ. ಯುಕೆ ಆ್ಯಂಡ್ ಕೋ ಕಂಪನಿಯ ಸ್ಥಾಪಕರಾದ ಕೆ. ಉಲ್ಲಾಸ್ ಕಾಮತ್ ಅವರು ಈ ಸಂವಾದವನ್ನು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರೂಕುಲದ 200 ವಿದ್ಯಾರ್ಥಿಗಳನ್ನು ಒಳಗೊಂಡ ‘ಸಾಯಿ ಸಿಂಫೋನಿ ಆರ್ಕೆಸ್ಟ್ರಾ’ ತಂಡದಿಂದ ವಿಶೇಷ ಸಂಗೀತ ಪ್ರದರ್ಶನ ಜರುಗಲಿದೆ. ಇದು ಭಾರತದ ಅತ್ಯಂತ ದೊಡ್ಡ ಸಿಂಫೋನಿ ವಾದ್ಯತಂಡವಾಗಿದ್ದು, ಅತಿ ಹೆಚ್ಚು ದೇಶಗಳ ಕಲಾವಿದರನ್ನು ಒಳಗೊಂಡಿರುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ. ಮಾನವಕುಲದ ಸೇವೆಯಲ್ಲಿ ಎಲ್ಲರೂ ಒಂದೇ ಕುಟುಂಬದವರಾಗಿ ಕೈಜೋಡಿಸುವಂತೆ ಈ ಕಾರ್ಯಕ್ರಮವು ಸ್ಮರಣೀಯ ಆಹ್ವಾನ ನೀಡಿದೆ.
-ಮಂದಾರ ರಾಜೇಶ್ ಭಟ್

