ಹಾರಾಡಿಯಲ್ಲಿ ಅಪಾಯಕಾರಿ ಒಣಗಿದ ಮರಗಳು: ತೆರವಿಗೆ ಆಗ್ರಹ

0
7

ವಾಹನ ಸವಾರರು, ಶಾಲಾ ವಾಹನಗಳಿಗೆ ಅಪಾಯ : ಕೂಡಲೇ ತೆರವುಗೊಳಿಸಲು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯ

ಬ್ರಹ್ಮಾವರ: ತಾಲೂಕಿನ ಹಾರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಾಳ–ಕುಕ್ಕುಡೆ–ಬ್ರಹ್ಮಾವರ ರಸ್ತೆಯ ಬದಿಯಲ್ಲಿ ಹಾಗೂ ಹಾರಾಡಿ ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ಅಪಾಯಕಾರಿಯಾಗಿ ಒಣಗಿರುವ ಮೂರು–ನಾಲ್ಕು ಮರಗಳು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ.

ಈ ರಸ್ತೆಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಶಾಲಾ ವಾಹನಗಳೂ ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಒಣಗಿರುವ ಮರಗಳು ಯಾವುದೇ ಸಂದರ್ಭದಲ್ಲಿ ರಸ್ತೆಗೆ ಅಥವಾ ವಾಹನಗಳ ಮೇಲೆ ಬೀಳುವ ಅಪಾಯವಿದ್ದು, ಇದರಿಂದ ಜೀವಹಾನಿ ಸೇರಿದಂತೆ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗದಲ್ಲಿಯೇ ಅಪಾಯಕಾರಿ ಮರಗಳಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮರಗಳು ರಸ್ತೆಗೆ ಉರುಳಿ ಬೀಳುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಯಾವುದೇ ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಮರಗಳನ್ನು ತೆರವುಗೊಳಿಸುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.

ಹಾರಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಮೂಲಕ ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.