
ಉಡುಪಿ : ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಡೇವಿಡ್ ಡಿಸೋಜಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃತ್ಯಕ್ಕೆ ಬೈಕ್ ಒದಗಿಸಿ ಅಪರಾಧಿಕ ಒಳಸಂಚು ನಡೆಸಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಕಾರ್ಕಳ-ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಬಾಳಿಹಿತ್ಲು ಹುದಾರ ಹೌಸ್ ನಿವಾಸಿ ಲೋಕೇಶ್ ತೇಜ ಕೊಠಾರಿ (42) ಎಂದು ಗುರುತಿಸಲಾಗಿದೆ.
ಆರೋಪಿ ಲೋಕೇಶ್ ತೇಜ ಈ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ, ಈ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿ ಪರಿಚಯವಾಗಿ ಸ್ನೇಹಿತರಾಗಿದ್ದರು. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್ ರಸ್ತೋಗಿ ಹಾಗೂ ರಾಜು ಎಂಬವರಿಗೆ ಲೋಕೇಶ್ ಮೋಟಾರ್ ಸೈಕಲ್ ಒದಗಿಸಿದ್ದಲ್ಲದೆ, ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಸಂಚು ರೂಪಿಸಿದ್ದನು. ವಿಶೇಷ ಕರ್ತವ್ಯದಲ್ಲಿದ್ದ ಕಾರ್ಕಳ ಹಾಗೂ ಪಡುಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬೈಂದೂರಿನ ಯಡ್ತರೆ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದರು. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳು ಹಾಗೂ ಬೈಕ್‌ನ ಇಂಜಿನ್ ಮತ್ತು ಚಾಸೀಸ್ ಸಂಖ್ಯೆಯನ್ನು ಅಳಿಸಲು ಬಳಸುತ್ತಿದ್ದ ಮಿಷಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಆಗಸ್ಟ್ 7, 2026 ರಂದು ಮಧ್ಯಾಹ್ನ 3:45 ಕ್ಕೆ ಮುದರಂಗಡಿಯಲ್ಲಿ ಡೇವಿಡ್ ಡಿಸೋಜಾ ಅವರ ತಲೆಗೆ ಮೋಟಾರ್ ಸೈಕಲ್‌ನಲ್ಲಿ ಬಂದ ಸಹಸವಾರನು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದನು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈಗಾಗಲೇ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ವಾಜುಲ್ ಶೇಖ್ ಅಲಿಯಾಸ್ ದೀಪಕ್, ಹಾಗೂ ಹಣಕಾಸು ನೆರವು ಮತ್ತು ಒಳಸಂಚು ನಡೆಸಿದ್ದ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಮತ್ತು ಕಿಶೋರ್ ರಾಮ ಪೂಜಾರಿ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ 1ನೇ ಆರೋಪಿ ರಾಜು ಎಂಬಾತನ ಮೇಲೆ ಬೈಂದೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
