ಕೋಲಾರ: ಸತ್ತ ಹಲ್ಲಿ ಬಿದ್ದಿದ್ದ ಬಿರಿಯಾನಿ ಮೊಸರು ಬಜ್ಜಿ ತಿಂದು ಓರ್ವ ಗ್ರಾಹಕರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ. ಬಿಜಿಟಿ ಮಾಂಸಾಹಾರಿ ಹೋಟೆಲ್‌ನಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಹಲ್ಲಿ ಪತ್ತೆ ಆಗಿದೆ. ನೇರಳೆಕೆರೆ ನಿವಾಸಿ ಲಲಿತಾ ಅವರು ವಾಂತಿ, ಭೇದಿ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಆಹಾರ ಸೇವಿಸಿದ್ದ ಮತ್ತೋರ್ವ ವ್ಯಕ್ತಿಯೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆಹಾರ, ಆರೋಗ್ಯ ಇಲಾಖೆ ಅಧಿಕಾರಿಗಳಿಂದ ತನಿಖೆಗೆ ಒತ್ತಾಯಿಸಲಾಗಿದೆ.
ನೇರಳೆಕೆರೆ ನಿವಾಸಿ ಲಲಿತಾ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕಾರೋನೇಷನ್ ರಸ್ತೆಯಲ್ಲಿರುವ ಬಿಜಿಟಿ ಹೋಟೆಲ್ ತೆರಳಿದ್ದಾರೆ. ಈ ವೇಳೆ ಅವರಿಗೆ ಕೊಟ್ಟಿದ್ದ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ ಆಗಿದೆ. ಕೂಡಲೇ ಹೋಟೆಲ್ ಮಾಲೀಕರ ಗಮನಕ್ಕೆ ತಂದಿದ್ದಾರೆ. ಆಗ ಬೇರೆ ಬಿರಿಯಾನಿ ಕೊಟ್ಟು ಸಮಾಧಾನ ಮಾಡಿದ್ದಾರೆ. ಇನ್ನು ಉಳಿದ ಜನರು ಬಿರಿಯಾನಿ ಬಿಟ್ಟು ತೆರಳಿದರು.
ಬಿರಿಯಾನಿ ತಿಂದಿದ್ದ ಲಲಿತಾ ಅವರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಸದ್ಯ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಟೆಲ್ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದು ಲಲಿತಾ ಆರೋಪ ಮಾಡಿದ್ದಾರೆ.
ಬಿಜಿಟಿ ಹೋಟೆಲ್ ಬಂದ್
ಇನ್ನು ಘಟನೆ ಹಿನ್ನೆಲೆ ಜಿಲ್ಲಾ ಆಹಾರ ಸುರಕ್ಷತಾ ನಿರೀಕ್ಷಕ ಪ್ರತೀಶ್, ನಗರಸಭೆ ಆಯುಕ್ತ ಸತ್ಯನಾರಾಯಣ, ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ಸೇರಿದಂತೆ ಅಧಿಕಾರಿಗಳು ಪರಿಶೀಲನೆ ಮಾಡಿದರು. ಹೋಟೆಲ್‌ನಲ್ಲಿ ತಯಾರಿಸಲಾಗಿದ್ದ ಆಹಾರದ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ರವಾನಿಸಿದ್ದಾರೆ. ವರದಿ ಬರುವವರೆಗೆ ಬಿಜಿಟಿ ಹೋಟೆಲ್ ಬಂದ್ ಮಾಡಲು ಅಧಿಕಾರಿಗಳು ಆದೇಶಿಸಿದ್ದು, ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ಕುರಿತು ತನಿಖೆ ಆರಂಭಿಸಿದ್ದಾರೆ.

