ಅಪ್ರಾಪ್ತ ಬಾಲಕಿಗೆ ಪ್ರಾಣ ಬೆದರಿಕೆ : ಅತ್ಯಾಚಾರ ಆರೋಪಿಯ ಬಂಧನ

0
33

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ವಿಷಯವನ್ನು ಯಾರಿಗೂ ತಿಳಿಸದಂತೆ ಪ್ರಾಣ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಧರ್ಮಸ್ಥಳ ಠಾಣಾ ಪೊಲೀಸರು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್ (21) ಬಂಧಿತ ಆರೋಪಿ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯ ಮೇಲೆ ಆರೋಪಿ 2025ರ ಸೆಪ್ಟೆಂಬರ್‌ನಿಂದ ನವೆಂಬರ್‌ ಅವಧಿಯಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಪ್ರಾಣಕ್ಕೆ ಅಪಾಯ ಉಂಟು ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಘಟನೆಯ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಕುರಿತು ಸಂತ್ರಸ್ತೆಯ ಕಡೆಯಿಂದ ದೂರು ನೀಡಲಾಗಿದ್ದು, ಆಗಸ್ಟ್ 23, 2026ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯ ಕಲಂ 4(2), 6ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ಆರೋಪಿ ಶ್ರೀಕಾಂತ್ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣಾ ಪಿಎಸ್‌ಐ ಸಮರ್ಥ್ ಆರ್. ಗಾಣಿಗೇರ ನೇತೃತ್ವದ ಪೊಲೀಸ್ ತಂಡವು ತನಿಖೆ ನಡೆಸಿ, ಆರೋಪಿಯು ದೊಡ್ಡಬಳ್ಳಾಪುರದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಕಲೆಹಾಕಿತು.

ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ದೊಡ್ಡಬಳ್ಳಾಪುರದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.