ಮಂಗಳೂರಿನಲ್ಲಿ ನರ್ಸ್‌ಗೆ ಕೊಲೆ ಬೆದರಿಕೆ : ದೂರು ನೀಡಿದ ಬೆನ್ನಲ್ಲೇ ವಾಟ್ಸಾಪ್‌ನಲ್ಲಿ ‘ತಲೆ ತೆಗೀತೀನಿ’ ಎಂದ ಆರೋಪಿ

0
30

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಸ್ ನಿಲ್ದಾಣದಲ್ಲಿ ಏಕಪಕ್ಷೀಯ ಪ್ರೀತಿಯ ಹಿನ್ನೆಲೆಯಲ್ಲಿ ಯುವತಿ ಲಾವಣ್ಯಾ ಕೊಲೆಯಾದ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಯುವತಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣವೊಂದು ಆತಂಕ ಮೂಡಿಸಿದೆ. ತನ್ನ ಮೇಲೆ ದೌರ್ಜನ್ಯ ನಡೆಸಿದ ಆರೋಪದಡಿ ಯುವತಿಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ, ಆರೋಪಿ ಆಕೆಗೆ ವಾಟ್ಸಾಪ್ ಮೂಲಕ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಆಕೆಯ ಸ್ನೇಹಿತೆಯರೊಂದಿಗೂ ಗಲಾಟೆ ನಡೆಸಿ ಹಲ್ಲೆಗೆ ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಮಂಗಳೂರಿನ ನೀರುಮಾರ್ಗದಲ್ಲಿ ವಾಸವಾಗಿದ್ದ ಪುತ್ತೂರು ಮೂಲದ ನರ್ಸ್ ನಂದಿನಿ ಅವರು ಈ ಕುರಿತು ದೂರು ನೀಡಿದ್ದಾರೆ. ಕಳೆದ ಆಗಸ್ಟ್ 16ರಂದು ನಂದಿನಿ ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಮನೆಯಲ್ಲಿದ್ದ ನಾಯಿಗೆ ಊಟ ಹಾಕಲು ಮನೆಯ ಕೀಯನ್ನು ಸ್ನೇಹಿತೆ ಚಂದನಾಗೆ ನೀಡಿದ್ದರು. ಆಗಸ್ಟ್ 17ರಂದು ಚಂದನಾ ಮತ್ತೊಬ್ಬ ಸ್ನೇಹಿತೆ, ಕೇರಳ ಮೂಲದ ನರ್ಸ್ ಆದಿತ್ಯಾ ಅವರೊಂದಿಗೆ ನಂದಿನಿ ಮನೆಗೆ ತೆರಳಿದ್ದರು.

ಈ ವೇಳೆ ಆದಿತ್ಯಾ ನೀಡಿದ ಮಾಹಿತಿಯ ಆಧಾರದ ಮೇಲೆ ಅಲ್ಲಿಗೆ ಬಂದಿದ್ದ ನೌಶದ್ ಎಂಬಾತ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಂದನಾ ಹಾಗೂ ಆದಿತ್ಯಾ ಅವರನ್ನು ಅಶ್ಲೀಲವಾಗಿ ನಿಂದಿಸಿ ಗಲಾಟೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂದಿನಿ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಆಕೆಯೊಂದಿಗೂ ಅಶ್ಲೀಲವಾಗಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

‘ನಿನ್ನ ತಲೆ ತೆಗೀತೀನಿ’ ಎಂದು ವಾಟ್ಸಾಪ್‌ನಲ್ಲಿ ಬೆದರಿಕೆ

ಘಟನೆಗೆ ಸಂಬಂಧಿಸಿದಂತೆ ನಂದಿನಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ನೌಶದ್ ವಿರುದ್ಧ ದೂರು ನೀಡಿದ್ದರು. ಈ ವಿಚಾರ ತಿಳಿದ ಬಳಿಕ ಆರೋಪಿ ಕೋಪಗೊಂಡು ನಂದಿನಿಗೆ ವಾಟ್ಸಾಪ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿ, ಪೊಲೀಸರಿಗೆ ಶರಣಾಗುವ ಮುನ್ನವೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬೆದರಿಕೆಯಿಂದ ಆತಂಕಗೊಂಡ ನಂದಿನಿ ಆಗಸ್ಟ್ 20ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಿದ್ದರು. ತನ್ನ ಜೀವಕ್ಕೆ ಅಪಾಯವಿದ್ದು, ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದರು.

ಮತ್ತೊಬ್ಬ ನರ್ಸ್‌ಗೂ ಬ್ಲಾಕ್‌ಮೇಲ್ ಆರೋಪ

ಇದೇ ಪ್ರಕರಣದಲ್ಲಿ ಮತ್ತೊಬ್ಬ ನರ್ಸ್ ಆದಿತ್ಯಾ ಅವರಿಗೂ ಆರೋಪಿ ಬೆದರಿಕೆ ಹಾಗೂ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನೌಶದ್ ಬಳಿ ತನ್ನ ಫೋಟೋ ಹಾಗೂ ವಿಡಿಯೋಗಳಿವೆ ಎಂದು ಆದಿತ್ಯಾ ಕೆಲವರ ಬಳಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಹೀಗಾಗಿ ಫೋಟೋ-ವಿಡಿಯೋಗಳನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡಲಾಗುತ್ತಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಪ್ರಸ್ತುತ ಆದಿತ್ಯಾ ಕೇರಳಕ್ಕೆ ತೆರಳಿದ್ದು, ಆಕೆಯ ಸಂಪರ್ಕ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಇನ್ನೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ ನಂದಿನಿ ಹಾಗೂ ಆದಿತ್ಯಾ ಅವರನ್ನು ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ ಎನ್ನಲಾಗಿದೆ. ಇದರಿಂದ ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದ ಆರೋಪ

ದೂರು ನೀಡಿದ ಬಳಿಕವೂ ಆರೋಪಿ ವಿರುದ್ಧ ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ನಂದಿನಿ ಹಾಗೂ ಆಕೆಯ ಪರ ನಿಂತಿರುವ ಹಿಂದೂ ಸಂಘಟನೆಗಳು ಆರೋಪಿಸಿವೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಎದುರಿಸುತ್ತಿರುವ ಮಹಿಳೆಗೆ ತಕ್ಷಣ ಪೊಲೀಸ್ ರಕ್ಷಣೆ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.

“ಮಂಗಳೂರಿನಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳನ್ನು ನೋಡಿದರೆ ಹೊರಗೆ ಓಡಾಡಲು ಭಯವಾಗುತ್ತಿದೆ. ನಮಗೆ ಸೂಕ್ತ ರಕ್ಷಣೆ ಬೇಕು” ಎಂದು ನಂದಿನಿ ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಕಮಿಷನರ್ ಸ್ಪಷ್ಟನೆ

ಪ್ರಕರಣದಲ್ಲಿ ಆರೋಪಿ ವಿರುದ್ಧ ತಕ್ಷಣ ಬಂಧನ ಕ್ರಮ ಕೈಗೊಳ್ಳದಿರುವ ಕುರಿತು ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಆರೋಪಿಯನ್ನು ಬಂಧಿಸುವ ಉದ್ದೇಶ ಪೊಲೀಸರಿಗಿದೆ. ಪ್ರಕರಣದಲ್ಲಿ ಯಾವುದೇ ರೀತಿಯ ವಿನಾಯಿತಿ ನೀಡಲಾಗಿಲ್ಲ. ಆದರೆ ದೂರವಾಣಿ ಮೂಲಕ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ನಿಗದಿಯಾಗಿರುವ ಶಿಕ್ಷೆಯ ಮಿತಿ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಇರುವುದರಿಂದ, ತಕ್ಷಣ ಬಂಧಿಸಲು ಕಾನೂನಿನಲ್ಲೇ ಅವಕಾಶವಿಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ.

ಪೊಲೀಸರ ಬಂಧನಕ್ಕೂ ಮುನ್ನವೇ ಕೋರ್ಟ್‌ಗೆ ಹಾಜರಾದ ಆರೋಪಿ

ಪೊಲೀಸ್ ಕಮಿಷನರ್ ಅವರ ಈ ಸ್ಪಷ್ಟನೆ ಬೆನ್ನಲ್ಲೇ ಆರೋಪಿ ನೌಶದ್ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಮುನ್ನವೇ ನ್ಯಾಯಾಲಯದ ಮುಂದೆ ಹಾಜರಾದ ನೌಶದ್, ಬಳಿಕ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿ ಬಂಧನಕ್ಕೊಳಗಾಗದೆ ನ್ಯಾಯಾಲಯದಿಂದ ಜಾಮೀನು ಪಡೆದಿರುವುದು ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತೊಂದೆಡೆ, ದೂರು ನೀಡಿರುವ ಯುವತಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಹಾಗೂ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆರೋಪ ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಪ್ರಕರಣದಲ್ಲಿ ಆರೋಪಗಳ ಸತ್ಯಾಸತ್ಯತೆ, ಫೋಟೋ-ವಿಡಿಯೋಗಳ ದುರ್ಬಳಕೆ ಹಾಗೂ ಯುವತಿಗೆ ನಿಜವಾಗಿಯೂ ಯಾವುದೇ ಅಪಾಯವಿದೆಯೇ ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕಿದೆ.