ಬೆಂಗಳೂರು: ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಮತ್ತಷ್ಟು ಪಾರದರ್ಶಕವಾಗಿ, ಸುರಕ್ಷಿತವಾಗಿ ಮತ್ತು ಲೋಪರಹಿತವಾಗಿ ನಡೆಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ **‘ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ನಿಯಮಗಳು, 2026’**ರ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಕರಡು ನಿಯಮಗಳ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ.
ಹೊಸ ನಿಯಮಗಳಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಂತದಿಂದ ಹಿಡಿದು ಪರೀಕ್ಷೆ ಮುಗಿಯುವವರೆಗೆ ಪ್ರತಿಯೊಂದು ಹಂತದಲ್ಲೂ ಗೌಪ್ಯತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪ್ರಶ್ನೆಪತ್ರಿಕೆಗಳ ಸಿದ್ಧತೆ ಮತ್ತು ಪರಿಶೀಲನಾ ಕಾರ್ಯವನ್ನು ಪರೀಕ್ಷಾ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಆಯ್ದ ವ್ಯಕ್ತಿಗಳಿಂದ ಮಾತ್ರ ನಡೆಸಲು ಉದ್ದೇಶಿಸಲಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು, ಪರಿಶೀಲಕರು, ಅನುವಾದಕರು ಹಾಗೂ ಮರುಪರಿಶೀಲಕರ ಗುರುತನ್ನು ಅತ್ಯಂತ ಗೌಪ್ಯವಾಗಿ ಇಡುವ ವ್ಯವಸ್ಥೆ ಮಾಡಲಾಗುತ್ತದೆ.
ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತ ವಾತಾವರಣದಲ್ಲಿ ಸಿದ್ಧಪಡಿಸಿ, ಪರೀಕ್ಷಾ ಪ್ರಾಧಿಕಾರ ಅನುಮೋದಿಸಿದ ಎನ್‌ಕ್ರಿಪ್ಟ್ ಮಾಡಿದ ಅಥವಾ ಸೀಲ್ ಮಾಡಲಾದ ತಾಂತ್ರಿಕ ವ್ಯವಸ್ಥೆಯ ಮೂಲಕವೇ ರವಾನಿಸುವುದು ಕಡ್ಡಾಯವಾಗಲಿದೆ.
ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಗೌಪ್ಯ ನೋಂದಣಿ ಪುಸ್ತಕ ಅಥವಾ ಸುರಕ್ಷಿತ ಡಿಜಿಟಲ್ ಲಾಗ್‌ನಲ್ಲಿ ದಾಖಲಿಸಬೇಕು. ಪ್ರಶ್ನೆಪತ್ರಿಕೆ ಸಿದ್ಧತೆ, ಪರಿಶೀಲನೆ, ಅನುವಾದ ಮತ್ತು ಎನ್‌ಕ್ರಿಪ್ಶನ್ ಸೇರಿದಂತೆ ಪ್ರತಿಯೊಂದು ಚಟುವಟಿಕೆಯ ದಾಖಲೆಯನ್ನು ನಿರ್ವಹಿಸುವ ಮೂಲಕ ಯಾರು, ಯಾವ ಹಂತದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ.
ಇದೇ ವೇಳೆ, ಅಧಿಕೃತವಾಗಿ ಅನುಮತಿಸಿದ ಸ್ವರೂಪವನ್ನು ಹೊರತುಪಡಿಸಿ ಪ್ರಶ್ನೆಪತ್ರಿಕೆಯ ಯಾವುದೇ ಕರಡು ಪ್ರತಿ, ಸಾಫ್ಟ್ ಕಾಪಿ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಉಳಿಸಿಕೊಳ್ಳುವುದನ್ನು ನಿಷೇಧಿಸಲಾಗುತ್ತದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಬಳಿಕ ಅಗತ್ಯವಿಲ್ಲದ ಕರಡು ಹಾಗೂ ಪ್ರತಿಗಳನ್ನು ನಿಯಮಾನುಸಾರ ನಾಶಪಡಿಸಬೇಕಾಗುತ್ತದೆ.
ಪ್ರಶ್ನೆಪತ್ರಿಕೆಗಳ ಮುದ್ರಣವನ್ನೂ ಪರೀಕ್ಷಾ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಭದ್ರತಾ ಮುದ್ರಣಾಲಯಗಳಲ್ಲಿ ಮಾತ್ರ ನಡೆಸಲು ಉದ್ದೇಶಿಸಲಾಗಿದೆ. ಮುದ್ರಣಾಲಯದಲ್ಲಿ ಬಳಸಲಾದ ಕಾಗದ, ಮುದ್ರಿಸಲಾದ ಪ್ರಶ್ನೆಪತ್ರಿಕೆಗಳ ಸಂಖ್ಯೆ ಹಾಗೂ ತಿರಸ್ಕರಿಸಿ ನಾಶಪಡಿಸಲಾದ ಪ್ರತಿಗಳ ಸಂಪೂರ್ಣ ಲೆಕ್ಕವನ್ನು ನಿರ್ವಹಿಸಬೇಕಾಗುತ್ತದೆ.
ಮುದ್ರಣಾಲಯಗಳೊಂದಿಗೆ ಕಠಿಣ ಗೌಪ್ಯತಾ ಒಪ್ಪಂದ (MoU) ಮಾಡಿಕೊಳ್ಳಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಗೌಪ್ಯತಾ ನಿಯಮ ಉಲ್ಲಂಘನೆಯಂತಹ ಘಟನೆಗಳು ನಡೆದರೆ ಸಂಬಂಧಪಟ್ಟ ಮುದ್ರಣಾಲಯವೂ ತನಿಖಾ ಸಂಸ್ಥೆಗಳ ಮುಂದೆ ಉತ್ತರದಾಯಿಯಾಗುವಂತೆ ನಿಯಮ ರೂಪಿಸಲಾಗುತ್ತಿದೆ.
ಮುದ್ರಿತ ಪ್ರಶ್ನೆಪತ್ರಿಕೆಗಳು ಮತ್ತು ಇತರ ಗೌಪ್ಯ ಪರೀಕ್ಷಾ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯಾ ಜಿಲ್ಲಾ ಖಜಾನೆಯ ಸುರಕ್ಷಿತ ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗುತ್ತದೆ. ಸ್ಟ್ರಾಂಗ್ ರೂಂಗಳಲ್ಲಿ ಡಬಲ್-ಲಾಕ್ ವ್ಯವಸ್ಥೆ, ಸಿಸಿಟಿವಿ ಕಣ್ಗಾವಲು ಹಾಗೂ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಖಜಾನೆ ನಿಯಮಾವಳಿಗಳ ಪ್ರಕಾರವೇ ಪ್ರಶ್ನೆಪತ್ರಿಕೆಗಳ ಸ್ವೀಕೃತಿ, ಸಂಗ್ರಹಣೆ, ಸಾಗಣೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ವಿತರಣೆ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಪರೀಕ್ಷಾ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸುವ ಪ್ರಸ್ತಾವವಿದೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಭದ್ರತೆ ಮತ್ತು ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದು, ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಿದ್ದಾರೆ.
ಜಿಲ್ಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳನ್ನು ಉಪ ಮುಖ್ಯ ಅಧೀಕ್ಷಕರನ್ನಾಗಿ ಹಾಗೂ ಪರೀಕ್ಷೆ ನಡೆಯುವ ಶಾಲೆ-ಕಾಲೇಜುಗಳ ಪ್ರಾಂಶುಪಾಲರನ್ನು ಕೇಂದ್ರ ಮುಖ್ಯಸ್ಥರನ್ನಾಗಿ ನೇಮಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ವೀಡಿಯೋಗ್ರಫಿ ಹಾಗೂ ತಾಂತ್ರಿಕ ಕಣ್ಗಾವಲು ವ್ಯವಸ್ಥೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇರಿಸಲು ವಿಶೇಷ ವೀಕ್ಷಕರು, ಹಾರುವ ಪಡೆ (Fly Squads) ಹಾಗೂ ಸೂಪರ್ದುದಾರರನ್ನು ನೇಮಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಪರೀಕ್ಷಾ ಅವಧಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ, ನಕಲು, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅನುಚಿತ ವಿಧಾನಗಳು ನಡೆಯದಂತೆ ನಿರಂತರ ನಿಗಾ ವಹಿಸುವ ಉದ್ದೇಶ ಹೊಂದಲಾಗಿದೆ.
ಹೊಸ ನಿಯಮಗಳು ಜಾರಿಗೆ ಬಂದರೆ ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತಕ್ಕೂ ಹೊಣೆಗಾರಿಕೆ ನಿಗದಿಯಾಗಲಿದ್ದು, ಲೋಪ ಅಥವಾ ಅಕ್ರಮ ನಡೆದ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಜವಾಬ್ದಾರಿಯನ್ನು ಗುರುತಿಸಲು ಸಾಧ್ಯವಾಗಲಿದೆ.
ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಅರ್ಹ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸುವುದು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವುದು ಕರಡು ನಿಯಮಗಳ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರಿಂದ ಬರುವ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ಅಂತಿಮ ನಿಯಮಗಳು ಪ್ರಕಟವಾಗುವ ನಿರೀಕ್ಷೆಯಿದೆ.

