ಮಂಗಳೂರಿನಲ್ಲಿ ಡೆಲಾಯ್ಟ್ ಇಂಡಿಯಾ ನೂತನ ಕಚೇರಿ ಆರಂಭ; 1,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯ ಗುರಿ

0
44

ಮಂಗಳೂರು : ಡೆಲಾಯ್ಟ್ ಇಂಡಿಯಾ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಂಗಳೂರಿನ ಕೊಟ್ಟಾರ ಚೌಕಿಯ ‘ವರ್ಕ್‌ವರ್ಕ್ ಟ್ರಯಾಂಗಲ್’ನಲ್ಲಿ ನೂತನ ಕಚೇರಿಯನ್ನು ಆರಂಭಿಸಿದೆ.

ಇದು ದೇಶದಲ್ಲಿ ಸಂಸ್ಥೆಯ 27ನೇ ಕಚೇರಿಯಾಗಿದ್ದು, ಪ್ರತಿಭಾವಂತರು ಇರುವಲ್ಲಿಗೇ ಉತ್ತಮ ವೃತ್ತಿಪರ ಅವಕಾಶಗಳನ್ನು ಕೊಂಡೊಯ್ಯುವ ಸಂಸ್ಥೆಯ ಬದ್ಧತೆಯನ್ನು ಎತ್ತಿತೋರಿಸುತ್ತದೆ.

ಆರಂಭದಲ್ಲಿ ಈ ಕಚೇರಿಯಲ್ಲಿ ಸುಮಾರು 250 ವೃತ್ತಿಪರರು ಕಾರ್ಯನಿರ್ವಹಿಸಲಿದ್ದು, ಹಂತಹಂತವಾಗಿ ಉದ್ಯೋಗಿಗಳ ಸಂಖ್ಯೆಯನ್ನು 1,000ಕ್ಕೂ ಹೆಚ್ಚಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಸಮಗ್ರ ಸಾಮರ್ಥ್ಯ ಮತ್ತು ವಿತರಣಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಈ ಕಚೇರಿಯು ಸ್ಥಳೀಯ ಪ್ರತಿಭಾವಂತರನ್ನು ಡೆಲಾಯ್ಟ್ ಇಂಡಿಯಾದ ರಾಷ್ಟ್ರೀಯ ಮತ್ತು ಜಾಗತಿಕ ಗ್ರಾಹಕ ಜಾಲದೊಂದಿಗೆ ಬೆಸೆಯಲಿದೆ. ಇಲ್ಲಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಡೇಟಾ ಮತ್ತು ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಕನ್ಸಲ್ಟಿಂಗ್, ತೆರಿಗೆ ಹಾಗೂ ರಿಸ್ಕ್ ಅಡ್ವೈಸರಿ ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳ ವೃತ್ತಿಪರರು ಕಾರ್ಯನಿರ್ವಹಿಸಲಿದ್ದಾರೆ.

ಈ ಕುರಿತು ಮಾತನಾಡಿದ ಡೆಲಾಯ್ಟ್ ಸೌತ್ ಏಷ್ಯಾದ ಸಿಇಒ ರೋಮಲ್ ಶೆಟ್ಟಿ, “ನಮ್ಮ ಕುಟುಂಬದ ಮೂಲ ಕರಾವಳಿ ಕರ್ನಾಟಕವಾಗಿದ್ದು, ಮಂಗಳೂರಿನಲ್ಲಿ ಕಚೇರಿ ಆರಂಭಿಸುತ್ತಿರುವುದು ನನಗೆ ತವರಿಗೆ ಮರಳಿದಂತಹ ಅನುಭವ ನೀಡುತ್ತಿದೆ. ಇಲ್ಲಿನ ಪ್ರತಿಭಾವಂತರು ಉದ್ಯೋಗಕ್ಕಾಗಿ ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಕುಟುಂಬದೊಂದಿಗಿದ್ದುಕೊಂಡೇ ವಿಶ್ವದರ್ಜೆಯ ಯೋಜನೆಗಳಲ್ಲಿ ಕೆಲಸ ಮಾಡಲು ಈ ಕಚೇರಿ ನೆರವಾಗಲಿದೆ” ಎಂದರು.

ಬಲಿಷ್ಠ ಶಿಕ್ಷಣ ಸಂಸ್ಥೆಗಳು, ಉತ್ತಮ ಮೂಲಸೌಕರ್ಯ ಹಾಗೂ ಕರಾವಳಿಯ ಜೀವನಶೈಲಿಯಿಂದಾಗಿ ‘ಭಾರತದ ಸಿಲಿಕಾನ್ ಬೀಚ್’ ಎಂದೇ ಖ್ಯಾತವಾಗಿರುವ ಮಂಗಳೂರು, ರಾಜ್ಯ ಸರ್ಕಾರದ “ಬಿಯಾಂಡ್ ಬೆಂಗಳೂರು” ಕಾರ್ಯತಂತ್ರದಡಿ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

ಡೆಲಾಯ್ಟ್ ಇಂಡಿಯಾ ಸ್ಥಳೀಯ ಹೊಸ ಪದವೀಧರರು ಮತ್ತು ಅನುಭವಿ ಪರಿಣತರನ್ನು ನೇಮಕ ಮಾಡಿಕೊಳ್ಳುವ ಜೊತೆಗೆ, ಮೆಟ್ರೋ ನಗರಗಳಲ್ಲಿರುವ ತನ್ನ ಉದ್ಯೋಗಿಗಳಿಗೆ ತವರಿಗೆ ಮರಳಲು ಅವಕಾಶ ಕಲ್ಪಿಸಲಿದೆ. ಅಲ್ಲದೆ, ಕ್ಯಾಂಪಸ್ ಸಂಪರ್ಕ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕರಾವಳಿಯ ಯುವ ಪ್ರತಿಭೆಗಳನ್ನು ಪೋಷಿಸಲು ಸಂಸ್ಥೆ ಮುಂದಾಗಿದೆ.