ಉಡುಪಿ : ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕನಿಷ್ಠ ಕೂಲಿಯನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಣಿಪಾಲದಲ್ಲಿ ಸಾವಿರಾರು ಕಾರ್ಮಿಕರು ಭಾರೀ ಪ್ರತಿಭಟನೆ ನಡೆಸಿದರು.

ಮಣಿಪಾಲದ ಟೈಗರ್ ಸರ್ಕಲ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಬಳಿಕ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಕನಿಷ್ಠ ಕೂಲಿ ಹೆಚ್ಚಳ, ಕಾರ್ಮಿಕರ ಭದ್ರತೆ, ಸಾಮಾಜಿಕ ಭದ್ರತಾ ಯೋಜನೆಗಳ ಸಮರ್ಪಕ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ಸಹಾಯಕ ಆಯುಕ್ತರ ಮೂಲಕ ರಾಜ್ಯ ಮುಖ್ಯಮಂತ್ರಿ ಅವರಿಗೆ ಸಾವಿರಾರು ಕಾರ್ಮಿಕರ ಸಹಿ ಸಂಗ್ರಹದ ಪ್ರತಿಯೊಂದಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ ಮಾತನಾಡಿ, ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ ಏರಿಕೆಯ ನಡುವೆ ಕಾರ್ಮಿಕರ ಜೀವನ ದುಸ್ತರವಾಗಿದ್ದು, ಸರ್ಕಾರ ತಕ್ಷಣ ಕನಿಷ್ಠ ಕೂಲಿಯನ್ನು ಪುನರ್ ಪರಿಶೀಲನೆ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ವಿ., ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್, ಹಂಚು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್. ನರಸಿಂಹ, ಜಿ.ಡಿ. ಪಂಜು, ಅಣ್ಣಪ್ಪ, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ರಾಜು ಪಡುಕೊಣೆ, ಸುಭಾಸ್ ಚಂದ್ರ ನಾಯಕ್, ಗಣೇಶ್ ತೊಂಡೆಮಕ್ಕಿ, ಸಂತೋಷ ಹೆಮ್ಮಾಡಿ, ಚಿಕ್ಕಯ್ಯ ಮೊಗವೀರ, ನಾಗರತ್ನ ಪಡುವರಿ, ಅಂಗನವಾಡಿ ಮುಖಂಡರಾದ ಭಾರತಿ, ಯಶೋಧ, ಬೀಡಿ ಫೆಡರೇಶನ್ ಮುಖಂಡರಾದ ಮಹಾಬಲ ಹೊಡೆಯರ ಹೋಬಳಿ, ಉಮೇಶ್ ಕುಂದರ್, ಸುನೀತಾ ಶೆಟ್ಟಿ, ಸುಮತಿ, ಬಲ್ಕೀಸ್, ನಳಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

